ADVERTISEMENT

ಗ್ರಾ.ಪಂ ಸಭೆಯಲ್ಲಿ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:50 IST
Last Updated 1 ಜೂನ್ 2011, 5:50 IST

ಡಂಬಳ: ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಎನ್‌ಆರ್‌ಇಜಿ ಹಾಗೂ 13ನೇ ಹಣಕಾಸು ಯೋಜನೆಯಡಿ 80 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ನಡೆಸಿದರು.

ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಯತ್ನಳ್ಳಿ ಹಾಗೂ ಪಿಡಿಓ ಅಧಿಕಾರಿಗಳು 13ನೇ ಹಣಕಾಸು ಯೋಜನೆಯಡಿ 2010-11ನೇ ಸಾಲಿನಲ್ಲಿ ಗ್ರಾ.ಪಂ. ಗೆ ದೊರೆತ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.

ಗ್ರಾ.ಪಂ. ಸದಸ್ಯರ ಗಮನಕ್ಕೆ ತರದೆ, ಸಾಮಾನ್ಯ ಸಭೆ ಕರೆಯದೇ ಈ ಅನುದಾನವನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ಅಲ್ಲದೆ ಈ ಹಿಂದೆ ಗ್ರಾಮ ಸಭೆಯಲ್ಲಿ ನಿಗದಿಯಾಗಿದ್ದ ಕಾಮಗಾರಿಯನ್ನೂ ಕೈ ಬಿಡಲಾಗಿದೆ. ಈ ಕುರಿತು ಅಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಅಲ್ಲಿಯ ತನಕ ಸಭೆ ನಡೆಸದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಕುರಿತು ಗ್ರಾ.ಪಂ. ಅಧ್ಯಕ್ಷರಿಂದ ಸೂಕ್ತ ಉತ್ತರ ಬರಲಿಲ್ಲ.

ನೋಡಲ್ ಅಧಿಕಾರಿ ವೈ. ಮಂಜುನಾಥ ಮಧ್ಯಸ್ಥಿಕೆ ವಹಿಸಿ, ಗ್ರಾಮ ಸಭೆಯಲ್ಲಾದ ನಡುವಳಿಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವಂತೆ ಅಧ್ಯಕ್ಷರು ಹಾಗೂ ಪಿಡಿಓ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರ ಅಭಿವೃದ್ಧಿ ನಿಧಿಯಿಂದ 22 ಲಕ್ಷ ರೂಪಾಯಿ ಅನುದಾನ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಿದ್ದರೂ ಹೊಸ ಪೈಪ್‌ಲೈನ್ ನಲ್ಲಿ ನೀರು ಸರಬರಾಜು ಮಾಡದಿರುವುದನ್ನು ನೋಡಲ್ ಅಧಿಕಾರಿಗಳ ಗಮನಕ್ಕೆ ತಂದಾಗ, ಕೂಡಲೇ ಸರಿಪಡಿಸುವಂತೆ ಅವರು ಸೂಚಿಸಿದರು.

ಗ್ರಾಮದಲ್ಲಿನ ಶೌಚಾಲಯ, ರಸ್ತೆ ಹಾಗೂ ನೀರು ಪೂರೈಕೆ ಸಮಸ್ಯೆಗಳ ಕುರಿತು ಗ್ರಾಮಸ್ಥರು ತಮ್ಮ ಅಹವಾಲು ಸಲ್ಲಿಸಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಯತ್ನಳ್ಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲ ಮಲ್ಲಗೌಡ ಪಾಟೀಲ, ಗ್ರಾ.ಪಂ. ಸದಸ್ಯರಾದ ಸುರೇಶ ಗಡಗಿ, ಕುಬೇರಪ್ಪ ಬಂಡಿ, ವಿರೂಪಾಕ್ಷಿ ಎಲಿಗಾರ ಜಾಕೀರ್ ಹುಸೇನ್ ಮೂಲಿಮನಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕ್ರಮಕ್ಕೆ ಆಗ್ರಹಿಸಿ ಶ್ರೀರಾಮ ಸೇನೆ ಪ್ರತಿಭಟನೆ
ಡಂಬಳ: ಸ್ಥಳೀಯ ಗ್ರಾ.ಪಂ. ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಗ್ರಾ.ಪಂ. ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಸಂಚಾಲಕ ಮಂಜಯ್ಯ ಸ್ವಾಮಿ ಅರವಠಗಿಮಠ ಹಾಗೂ ಕಾರ್ಯಕರ್ತರಾದ ಮಂಜು ಪೂಜಾರ, ರುದ್ರಪ್ಪ ಎಣಗಿ ಇತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.