ADVERTISEMENT

ಚಿನ್ನಾಭರಣಕ್ಕೆ ಸುಂಕ ವಹಿವಾಟು ಸ್ಥಗಿತ: ವ್ಯಾಪಾರಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 6:05 IST
Last Updated 21 ಮಾರ್ಚ್ 2012, 6:05 IST

ಗಜೇಂದ್ರಗಡ: ಕೇಂದ್ರ ಸರ್ಕಾರ ಮಂಡಿಸಿದ ಮುಂಗಡ ಪತ್ರದಲ್ಲಿ ಚಿನ್ನಾಭರಣಗಳ ಮೇಲೆ ಶೇ.4 ರಷ್ಟು ತೆರಿಗೆಯನ್ನು ವಿಧಿಸಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಕ್ರಮದಿಂದ ಹಿಂದೆ ಸರಿದು, ಕರಕುಶಲ ಕರ್ಮಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು   ಪಟ್ಟಣದ ಚಿನ್ನಾಭರಣ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರದ ಸರಾಫ ವರ್ತಕರ ಹಾಗೂ ಕುಶಲ ಕರ್ಮಿಗಳ ಸಂಘದ ಅಧ್ಯಕ್ಷ ಎಸ್.ವಿ ಸಂಕನೂರ ಮಾತನಾಡಿ, ಕೇಂದ್ರ ಸರ್ಕಾರ ಶೇ.2 ರಷ್ಟಿದ್ದ ತೆರಿಗೆಯನ್ನು ಶೇ.4 ಕ್ಕೆ ಹೆಚ್ಚಿಸಿರುವುದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.  

ಇದು ವ್ಯಾಪಾರದ ಮೇಲೆ ದುಷ್ಟರಿಣಾಮ ಬೀಳುವುದರಲ್ಲಿ ಸಂದೇಹವಿಲ್ಲ. ಕಾರಣ ತೆರಿಗೆಯನ್ನು ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳೀಯ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ದುರ್ಗಾ ವೃತ್ತ, ಅಂಬೇಡ್ಕರ್ ವೃತ್ತ, ಕಾಲಕಾಲೇಶ್ವರ ವೃತ್ತದ ಮೂಲಕ ಕುಷ್ಟಗಿ ರಸ್ತೆ ಮಾರ್ಗವಾಗಿ ಇಲ್ಲಿನ ವಿಶೇಷ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಸಂಘದ ಕಾರ್ಯದರ್ಶಿ ಪ್ರಶಾಂತ ಶಿರೋಡ್ಕರ, ಪರಮೇಶಪ್ಪ ಹಳ್ಳದ, ಮಹಾದೇವ ವೇರ್ಣೇಕರ್, ದತ್ತು ಹೊರಪೇಟಿ, ಮೋಹನ ಸವದಿ, ರಾಮಣ್ಣ ಮುದಗಲ್, ಅಶೋಕ ವೇರ್ಣೇಕರ್, ಗಣೇಶ ಪವಾರ, ಗಿರೀಶ ವೇರ್ಣೇಕರ್, ಹನುಮಂತ ಮುದಗಲ್, ನಾಗರಾಜ ವೇರ್ಣೇಕರ್, ವೆಂಕಟೇಶ ಪತ್ತಾರ, ಸದಾಶಿವ ಬಡಿಗೇರ ಸೇರಿದಂತೆ ಸ್ಥಳೀಯ ನೂರಾರು ಚಿನ್ನಾಭರಣ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.