ADVERTISEMENT

`ಜನರ ಆಸ್ತಿ ಕಿತ್ತುಕೊಳ್ಳುವ ಕಂಪೆನಿ ಬೇಡ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:32 IST
Last Updated 5 ಸೆಪ್ಟೆಂಬರ್ 2013, 6:32 IST

ಗದಗ: ಜನರ ಆಸ್ತಿ ಕಿತ್ತುಕೊಂಡು ಹೋಗುವ ಕಂಪೆನಿಗಳು ಬರುವುದು ಬೇಡ ಎಂದು ಹೇಳುವ ಮೂಲಕ ಪೋಸ್ಕೊ ರಾಜ್ಯದಿಂದ ಕಾಲ್ಕಿತ್ತಿರುವುದನ್ನು ಸಚಿವ ಎಚ್.ಕೆ.ಪಾಟೀಲ ಸಮರ್ಥಿಸಿಕೊಂಡರು.

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಬುಧವಾರ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಏರ್ಪಡಿಸಿದ್ದ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ `ಗದಗ ಉತ್ಸವ' ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪೋಸ್ಕೊಗೆ ಕಪ್ಪತ್ತಗುಡ್ಡ ತಪ್ಪಲೇ ಏಕೆ ಬೇಕಾಯಿತು. ರಾಜ್ಯದ ಬೇರೆಡೆ ಜಾಗ ತೋರಿಸಿದರೂ ಏಕೆ ಹೋಗಲಿಲ್ಲ. ಪವನ ವಿದ್ಯುತ್ ಘಟಕ ಸ್ಥಾಪನೆ ಜಾಗದಲ್ಲಿ ಉಕ್ಕಿನ ಕಾರ್ಖಾನೆ ಬಂದಿದ್ದರೆ ಎಷ್ಟು ನಷ್ಟವಾಗುತ್ತಿತ್ತು. ದುರುದ್ದೇಶ ಇಟ್ಟುಕೊಂಡು ಬಂದಿತ್ತು. ನಮ್ಮ ಆಸ್ತಿ ಕಿತ್ತುಕೊಂಡು ಹೋಗುವ ಕಂಪೆನಿಗಳು ಅವಶ್ಯಕತೆ ಇಲ್ಲ ಎಂದು ಹೇಳಿದರು.

ಬಂಡವಾಳ ತೊಡಗಿಸಲು ಕಂಪೆನಿಗಳು ಮುಂದೆ ಬರುತ್ತವೆ. ಜಿಲ್ಲೆಯಲ್ಲಿ ಬಂಡವಾಳ ಸ್ನೇಹಿ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕಾಗಿ ಎರಡು ಮೂರು ವರ್ಷ ಕಾಯಬೇಕು. ಸರ್ಕಾರ ಮಾತ್ರವಲ್ಲದೆ ಪಕ್ಷ ಭೇದ ಮರೆತು ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಭೂಮಿಯಲ್ಲಿ ನಾವೇ ಹಣ ತೊಡಗಿಸುವ ಸನ್ನಿವೇಶ ಸೃಷ್ಟಿಯಾಗಬೇಕು. ಇದಕ್ಕಾಗಿ ಐದು ವರ್ಷದಿಂದ ಪ್ರಯತ್ನ ನಡೆದಿದೆ ಎಂದು ನುಡಿದರು. ಸಣ್ಣ ಪಟ್ಟಣಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಉದ್ಯಮಿಗಳಿಗೆ ಬೆಂಬಲ, ಪ್ರೋತ್ಸಾಹ ನೀಡಲಿಲ್ಲ. ವಿಚಾರ ಸಂಕಿರಣ, ಚರ್ಚೆ ನಡೆಸಬೇಕಿತ್ತು. ಎಲ್ಲವೂ ನಿಂತು ಹೋಗಿದೆ. ಜನರು , ಕೈಗಾರಿಕೋದ್ಯಮಿಗಳು, ಜನಪ್ರತಿನಿಧಿಗಳು ಜಾಗೃತರಾಗಬೇಕು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆ ಏನು ಆಯಿತು ಎಂಬುದನ್ನು ಜನರು ಪ್ರಶ್ನಿಸಬೇಕು.

  ಆರ್ಥಿಕ ಹಿಂಜರಿತದಿಂದ ಉತ್ಪಾದನೆಗಳು ಸೊರಗಿವೆ. ಹಿಂದೆ ಗದಗ ಎಂದರೆ ಮುದ್ರಣ ಕಾಶಿ ಎನ್ನುತ್ತಿದ್ದರು. ಪ್ರಿಂಟಿಂಗ್ ಪ್ರೆಸ್‌ಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕಡೆ ಹೆಚ್ಚು ಗಮನ ಕೊಡಲಿಲ್ಲ. ಇದೇ ಕಾರಣಕ್ಕೆ ಶೇ. 95ರಷ್ಟು ಮುಚ್ಚಿದವು. ಎಣ್ಣೆ ಕಾರ್ಖಾನೆ, ಜಿನ್ನಿಂಗ್ ಮಿಲ್ ಸಹ ಬಂದ್ ಆಗಿವೆ ಎಂದರು.

ಪವನ ವಿದ್ಯುತ್ ಘಟಕಗಳಿಂದ 331 ವೆುಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ನಮ್ಮ ಸೌಲಭ್ಯ ಬಳಸಿಕೊಂಡು ಹಣವಂತವರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಐದು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಆರ್.ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಐ.ಕುಂಬಾರ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಜಶೇಖ ಶಿರೂರ, ನಬಾರ್ಡ್ ಹಿರಿಯ ಅಧಿಕಾರಿ ಶರವಣ್ಣನ್, ಸಂಗಮೇಶ ದುಂದೂರ, ರಾಜೇಶ ಕುರಡಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.