ADVERTISEMENT

ಜಿ.ಪಂ. ಅಧ್ಯಕ್ಷರಾಗಿ ಕಮಲವ್ವ ಸಜ್ಜನರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 6:30 IST
Last Updated 21 ಡಿಸೆಂಬರ್ 2013, 6:30 IST

ಗದಗ: ಜಿಲ್ಲಾ ಪಂಚಾಯಿತಿ ಎರಡನೇ ಅವಧಿಯ ಉಳಿದ ಅವಧಿಗೆ ಅಧ್ಯಕ್ಷರಾಗಿ ಕಮಲವ್ವ ಸಜ್ಜನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಬಿಜೆಪಿ ಪಕ್ಷದ ಬೆಳ್ಳಟ್ಟಿ ಕ್ಷೇತ್ರದ ಕಮಲವ್ವ ಒಬ್ಬರೇ  ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಬೆಳಗಾವಿಯ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಕೆಲ ತಿಂಗಳ ಹಿಂದೆಯಷ್ಟೇ ರಮೇಶ ಮುಂದಿನಮನಿ ಅವರು ಉಪಾಧ್ಯಕ್ಷರಾಗಿ ಎರಡನೇ ಅವಧಿಗೂ ಆಯ್ಕೆಯಾಗಿದ್ದರು.

ಕಮಲವ್ವ ಸಜ್ಜನರ ಅವರು ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದವರು. ಗಾಣಿಗ ಸಮುದಾಯಕ್ಕೆ ಸೇರಿದ ಅವರು ಪ್ರಥಮ ಬಾರಿಗೆ ಬಿಜೆಪಿಯಿಂದ ಬೆಳ್ಳಟ್ಟಿ ಮತಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಮೊದಲ ಆಯ್ಕೆಯಲ್ಲಿಯೇ ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ಕ್ಷೇತ್ರದ ಕಾರ್ಯಕರ್ತರಲ್ಲಿ ಸಂತಸ ಉಂಟು ಮಾಡಿದೆ. ಕ್ಷೇತ್ರದಲ್ಲಿ ಸಿಹಿ ವಿತರಿಸಿ ಸಂಭ್ರಮ ಆಚರಿಸಿದರು. ಹತ್ತು ತಿಂಗಳಲ್ಲಿ ಐದು ತಿಂಗಳು ಮುಗಿದಿರುವುದರಿಂದ ಕಮಲವ್ವ ಅವರ ಅಧಿಕಾರ ಅವಧಿ ಕೇವಲ ಐದು ತಿಂಗಳು. 

ತಪ್ಪಿದ ಅವಕಾಶ: 2012ರ ಅಕ್ಟೋಬರ್‌ನಲ್ಲಿ ಜಿಲ್ಲಾ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸದಸ್ಯರಾದ ಎಂ.ಎಸ್‌.ಪಾಟೀಲ ಮತ್ತು ದೊಡ್ಡಗೌಡರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಇಬ್ಬರಿಗೂ ತಲಾ ಹತ್ತು ತಿಂಗಳ ಅಧಿಕಾರ ಹಂಚಿಕೆ ಸೂತ್ರ ರೂಪಿಸಿ ಒಳ ಒಪ್ಪಂದ ಮಾಡಲಾಗಿತ್ತು. ಮೊದಲ ಅವಧಿಗೆ ಎಂ.ಎಸ್‌.ಪಾಟೀಲ ಅಧ್ಯಕ್ಷರಾದರು. ಪಾಟೀಲ ಹತ್ತು ತಿಂಗಳ ಅವಧಿ ಪೂರೈಸಿದ್ದರು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದರು.

ಪಕ್ಷದ ವರಿಷ್ಠರಿಗೆ ಸೆಡ್ಡು ಹೊಡೆದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಯತ್ನಿಸಿದರು. ಈ ಬೆಳವಣಿಗೆಯಿಂದ ಮುಜುಗರ ಅನುಭವಿಸಿದ ವರಿಷ್ಠರು ಪಾಟೀಲ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಕರೆದರು. ಅಷ್ಟರಲ್ಲಿ ಪಾಟೀಲ ರಾಜೀನಾಮೆ ನೀಡಿದರು.

ಗದಗ ಜಿಲ್ಲಾ ಪಂಚಾಯಿತಿ ಒಟ್ಟು 18 ಸ್ಥಾನಗಳ ಪೈಕಿ ಬಿಜೆಪಿ 11 ಹಾಗೂ ಕಾಂಗ್ರೆಸ್‌ 7 ಸದಸ್ಯರನ್ನು ಹೊಂದಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಹಮ್ಮಿಗಿ ಕ್ಷೇತ್ರದ ಜಿ.ಪಂ. ಸದಸ್ಯ ಹೇಮಗಿರೀಶ ಹಾವಿನಾಳ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತರು. ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿ ಹಮ್ಮಿಗಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಬಿಜೆಪಿ ಸಂಖ್ಯೆ 12 ದಾಟಿತ್ತು.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ದೊಡ್ಡಗೌಡರ ಮತ್ತು ಹೇಮಗೀರಿಶ  ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮೂಲಕ ಹೇಮಗೀರಿಶ ಅವರು ಒತ್ತಡ ಹೇರಲಾರಂಭಿಸಿದ್ದರು. ಆದರೆ ಜಿಲ್ಲಾ ಘಟಕ ಅಧ್ಯಕ್ಷ ಕಳಕಪ್ಪ ಬಂಡಿ ಅವರಿಗೆ ದೊಡ್ಡಗೌಡರ ಮೇಲೆ ಒಲವಿತ್ತು.

ಚುನಾವಣಾ ಮುನ್ನ ದಿನವಾದ ಗುರುವಾರ ಮಾಜಿ ಸಚಿವರಾದ ಕಳಕಪ್ಪ ಬಂಡಿ, ಸಿ.ಸಿ.ಪಾಟೀಲ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ ಅವರು ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದರು.

ದೊಡ್ಡಗೌಡರ ಪರವಾಗಿ ಏಳು ಮಂದಿ ಬೆಂಬಲ ಸೂಚಿಸಿದರೇ, ಶಾಂತವ್ವ ದಂಡಿನ, ಶಾರದಾ ಹಿರೇಗೌಡರ ಮತ್ತು ಹೇಮಗಿರೀಶ  ಅವರು ತಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುವಂತೆ ಕೋರಿದರು. ಎಂ.ಎಸ್‌.ಪಾಟೀಲ ಅವರು ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದರು. ಮಾಜಿ ಅಧ್ಯಕ್ಷ ಚಂಬವ್ವ ಪಾಟೀಲ ಅವರು ಕಮಲವ್ವ ಸಜ್ಜನವರ ಅವರ ಹೆಸರು ಸೂಚಿಸಿದ್ದರು.

ಇಬ್ಬರ ಪೈಪೋಟಿಯಲ್ಲಿ ವರಿಷ್ಠರು ಅನ್ಯ ಮಾರ್ಗ ಇಲ್ಲದೆ ಕಮಲವ್ವ ಸಜ್ಜನವರ ಅವರನ್ನೇ ಆಯ್ಕೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ಕಮ್ಮಲವ್ವ ಅವರ ಆಯ್ಕೆಯಲ್ಲಿ ಸಿ.ಸಿ.ಪಾಟೀಲ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾತು ಕೇಳಿ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.