ADVERTISEMENT

ಜೀವಭಯದಲ್ಲಿ ವಿದ್ಯಾರ್ಥಿಗಳ ಕಲಿಕೆ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 7:08 IST
Last Updated 1 ಡಿಸೆಂಬರ್ 2017, 7:08 IST

ಚಂದ್ರು ಎಂ. ರಾಥೋಡ್

ನರೇಗಲ್: ಕುಸಿಯುತ್ತಿರುವ ಛಾವಣಿ, ಬಿರುಕು ಬಿಟ್ಟಿರುವ ಗೋಡೆ, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡ... ಇವುಗಳ ನಡುವೆ ಜೀವಭಯದಲ್ಲಿ ಪಟ್ಟಣದ ಸರ್ಕಾರಿ ಉರ್ದು ಶಾಲೆಯ ಮಕ್ಕಳು ಪಾಠ ಕೇಳುತ್ತಿದ್ದಾರೆ. ಕೊಠಡಿಗಳೂ ಶಿಥಿಲಗೊಂಡಿರುವುದರಿಂದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಕರು ಆತಂಕದಲ್ಲೇ ದಿನದೂಡುತ್ತಿದ್ದಾರೆ.

ಶಾಲೆಯಲ್ಲಿ ಒಟ್ಟು 7 ಕೊಠಡಿಗಳಿವೆ. ಅವುಗಳಲ್ಲಿ 4 ಕೊಠಡಿಗಳು ಸಂಪೂರ್ಣ ದುಸ್ಥಿತಿಯಲ್ಲಿವೆ. ನರೇಗಲ್, ಮಾರನಬಸರಿ, ಕೊಚಲಾಪುರ, ದ್ಯಾಂಪುರ, ಜಕ್ಕಲಿಯ ಮಕ್ಕಳು ಇಲ್ಲಿ ಶಾಲೆ ಕಲಿಯಲು ಬರುತ್ತಾರೆ. ಶಾಲೆಯಲ್ಲಿ 1 ರಿಂದ 8 ತರಗತಿವರೆಗೆ ಒಟ್ಟು 61 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಬ್ಬ ಶಿಕ್ಷಕ, ಐವರು ಶಿಕ್ಷಕಿಯರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಚೆಗಷ್ಟೇ ಎಸ್.ಡಿ.ಎಂ.ಸಿ ಅಧ್ಯಕ್ಷರ ಅವಧಿ ಮುಗಿದಿದ್ದು, ನೂತನ ಸದಸ್ಯರು ಹಾಗೂ ಅಧ್ಯಕ್ಷರ ಆಯ್ಕೆ ಇನ್ನೂ ನಡೆದಿಲ್ಲ.

ADVERTISEMENT

‘ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಕೊಠಡಿಯ ಹೊರಗೆ ಹಾಗೂ ಮೈದಾನದಲ್ಲಿ ಕೂರಿಸಿ ಪಾಠ ಮಾಡುವ ಅನಿವಾರ್ಯತೆ ಇದೆ. ಮಳೆ ಅಥವಾ ವಿಪರೀತ ಬಿಸಿಲು ಬಂದರೆ ಎರಡು–ಮೂರು ತರಗತಿಗಳನ್ನು ಒಟ್ಟಿಗೆ ಸೇರಿಸಿ ಅಲ್ಪ–ಸ್ವಲ್ಪ ಚೆನ್ನಾಗಿರುವ ಮೂರು ಕೊಠಡಿಗಳಲ್ಲಿ ಪಾಠ ಮಾಡುತ್ತೇವೆ. ಶಾಲೆಯ ಗೋಡೆಗಳು ಸಂಪೂರ್ಣ ಹಾಳಾಗಿದ್ದು ಕುಸಿದು ಬೀಳುವ ಹಂತದಲ್ಲಿರುವುದರಿಂದ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ಮನವಿ ಮಾಡಿದರೆ, ಕಟ್ಟಡ ಕುಸಿದರೆ ಮಕ್ಕಳ ಜೀವದ ಜವಾಬ್ದಾರಿ ನೀವು ತಗೆದುಕೊಳ್ಳುತ್ತೀರಾ? ಎಂದು ಪ್ರಶ್ನಿಸುತ್ತಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕಿ ಹಫೀಜಾಬೇಗಂ ಶಿರಕೋಳ ಹೇಳಿದರು.

ಆತಂಕದಲ್ಲಿ ಪೋಷಕರು: ಈಗ ಹಳ್ಳಿಗಳಲ್ಲೂ ಕಾನ್ವೆಂಟ್‌ ಹಾವಳಿ ಹೆಚ್ಚಿದೆ. ಕಡುಬಡವರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳನ್ನು ನೆಚ್ಚಿಕೊಂಡಿದ್ದಾರೆ. ಉರ್ದು ಶಾಲೆಯ ಕಟ್ಟಡ ಶಿಥಿಲಗೊಂಡಿರುವುದರಿಂದ ಅದೆಷ್ಟೋ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿದೆ.

‘ಶಾಲಾ ಕಟ್ಟಡದ ಬಿರುಕಿನಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಶಿಥಿಲ ಶಾಲೆಯ ಕೊಠಡಿ, ಗೋಡೆಗಳ ದುರಸ್ತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಬ್ದುಲ್‌ರೆಹಮಾನ್‌ಸಾಬ್ ಕೊಪ್ಪದ ತಿಳಿಸಿದರು.

* * 

ಸರ್ಕಾರಿ ಶಾಲೆ ಉಳಿಸಿ ಎನ್ನುವ ಜನಪ್ರತಿನಿಧಿಗಳು ಶಾಲೆಗಳಿಗೆ ಮೂಲ ಸೌಕರ್ಯ ನೀಡದೇ ವಂಚಿಸುತ್ತಿದ್ದಾರೆ ಎಂಬುದಕ್ಕೆ ಪಟ್ಟಣದ ಸರ್ಕಾರಿ ಉರ್ದು ಶಾಲೆ ದುಸ್ಥಿತಿಯೇ ಸಾಕ್ಷಿ
ಮುತ್ತಣ್ಣ ಕಡಗದ
ಬಿಜೆಪಿ ಯುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.