ADVERTISEMENT

ಟಿಪ್ಪು ಸುಲ್ತಾನ್‌ ಆದರ್ಶ ಅಳವಡಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:47 IST
Last Updated 2 ಡಿಸೆಂಬರ್ 2013, 7:47 IST

ಗಜೇಂದ್ರಗಡ: ಟಿಪ್ಪು ಸುಲ್ತಾನನ ಧೈರ್ಯ, ಸಾಹಸ, ತ್ಯಾಗ ಮನೋಭಾವದ ಗುಣಗಳನ್ನು ಯುವಕರು ಮೈಗೂಡಿಸಿಕೊಂಡು ಆದರ್ಶಯುತ ಬದುಕು ನಡೆಸಬೇಕು ಎಂದು ರಾಜ್ಯ ಸಾಹಿತ್ಯ ಸಮಿತಿ ಸದಸ್ಯ, ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಟಿಪ್ಪು ಸುಲ್ತಾನ್‌ ನೌಜವಾನ್‌ ಕಮಿಟಿ ಗಜೇಂದ್ರಗಡ ವತಿಯಿಂದ ಇಲ್ಲಿನ ಈದ್ಗಾ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಜರತ್‌ ಟಿಪ್ಪು ಸುಲ್ತಾನ್‌ರ 264ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ಟಿಪ್ಪು ಎನ್ನ ಎಳೆ ವಯಸ್ಸಿನಲ್ಲಿ ತಂದೆಯೊಂದಿಗೆ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದ್ದನು. ಹೀಗಾಗಿ ಯುದ್ಧರಂಗ ಅವನಿಗೆ ಆಟದ ಮೈದಾನದಂತಿತ್ತು. ಬಾಲಂ ಪಾಳೆಯಗಾರರನ್ನು ಚಿಕ್ಕ ವಯಸ್ಸಿನಲೇ ಸೋಲಿಸಿದ್ದನು. ಹೈದರ್‌ಗೆ ತಿರುಪುತ್ತೂರು ಮತ್ತು ವಾಣಿಂಬಾಡಿ ಕೋಟೆಗಳನ್ನು ಗೆಲ್ಲಲು ಟಿಪ್ಪು ನೆರವಾದನು ಎಂದರು.

ಟಿಪ್ಪು ಒಂದು ಮತ್ತು ಎರಡನೆಯ ಆಂಗ್ಲೋ ಮೈಸೂರು ಯುದ್ಧಗಳಲ್ಲಿ ಬ್ರಿಟಿಷರ ವಿರುದ್ಧ ಕಾದಾಡಿದನು. ಕರ್ನಲ್‌ ಬೇಲಿಯನ್ನು ಸೋಲಿಸಿ, ಆರ್ಕಾಟ್‌, ಸತಗೂರ್‌ ಮತ್ತು ಆಂಬೂರುಳನ್ನು ಆಕ್ರಮಿಸಿ­ದನು. 1783 ರಲ್ಲಿ ವಾಂದಿವಾಷ್‌ ಯುದ್ಧದಲ್ಲಿ ಬ್ರಿಟಿಷ್‌ರನ್ನು ಸೋಲಿಸಿದನು. 1782 ರಲ್ಲಿ ತಂಜಾ­ವೂರಿನಲ್ಲಿ ಬ್ರೈತ್‌ವೈಟ್‌ನನ್ನು ಸೋಲಿಸಿ ಬಂಧಿಸಿದನು. ತನ್ನ ತಂದೆಯ ಮರಣದ ಸುದ್ಧಿ ಕೇಳಿ ಶ್ರೀರಂಗಪಟ್ಟಣಕ್ಕೆ ವಾಪಾಸ್ಸಾಗಿ ಎಲ್ಲ ಅಧಿಕಾರವನ್ನು ವಹಿಸಿಕೊಂಡು ಡಿಸೆಂಬರ್‌ 29, 1782 ರಂದು ಸಿಂಹಾಸನವೇರಿ ನವಾಬ್‌ ಟಿಪ್ಪು ಸುಲ್ತಾನ್‌ ಬಹದ್ದೂರ್‌ ಬಾದಷಹ ಎಂಬ ಬಿರುದು ಪಡೆದನು ಎಂದರು.

ಟಿಪ್ಪು ಹಿಂದೂಗಳ ಬಗ್ಗೆ ಉದಾರಿಯಾ­ಗಿದ್ದವು. ಅವನ ಅರಮನೆಯ ಪಟ್ಟದ ಆನೆ ಎಮ್ಮೆ ಕಣ್ಣಫಣಿ ರೋಗದಿಂದ ನರಳುವಾಗ ಅದು ನಂಜನ­ಗೂಡಿನ ಶ್ರೀಕಂಠೇಶ್ವರ ದೇವರ ತೀರ್ಥ­ದಿಂದ ಗುಣ ಮುಖ ಹೊಂದಿಯು. ಅದಕ್ಕೆ ಅವನು ಶ್ರೀಕಂಠೇಶ್ವರನಿಗೆ ಟಿಪ್ಪುಪಾದ್‌ಷಾಹಿ ಎಂಬ ಚಿನ್ನದ ದೂಪವನ್ನು ಕೊಟ್ಟು ಹಕಿಂ ನಂಜುಂಡ ಎಂಬ ಶಿಖರವನ್ನು ನಿರ್ಮಿಸಿದನು ಎಂದರು.

ಔರಂಗಜೇಬನಂತೆ ಜೆಜಿಯಾ ತಲೆ ಕಂದಾಯವನ್ನಾಗಲಿ, ಜಿಹಾದ್‌ ಧರ್ಮಯುದ್ಧ­ವನ್ನಾಗಲಿ ಹಿಂದೂಗಳ ಮೇಲೆ ಹೇರಲಿಲ್ಲ. ಅವನ ಆಸ್ಥಾನದಲ್ಲಿ ಗುರು ಗೋವರ್ಧನ, ಅಪ್ಪಾಜಿ­ರಾವ್‌, ಶ್ರೀಪತಿರಾವ್‌, ರಾಮರಾವ್‌, ಪೂರ್ಣ­ಯ್ಯರಂತಹ ಹಿಂದೂ ಮಂತ್ರಿಗಳೂ ಇದ್ದರು. ಗಾಂಧಿಜಿ ಇವನ ಚರಿತ್ರೆಯನ್ನು ಓದಿ ಈತನನ್ನು ಹಿಂದೂ ಮುಸ್ಲಿಂರ ಏಕತೆಯ ಪ್ರತೀಕವಾಗಿದ್ದನು ಎಂದಿ­ದ್ದುಂಟು ಎಂದರು.

ಇದೇ ಸಂದರ್ಭದಲ್ಲಿ 15 ಜನ ನಿವೃತ್ತ ಸೈನಿಕರು ಹಾಗೂ 2 ನಿವೃತ್ತ ಆರಕ್ಷಕರನ್ನು ಸನ್ಮಾನಿಸಲಾಯಿತು. ಗಜೇಂದ್ರಗಡ ಅಂಜು­ಮನ್‌ ಇಸ್ಲಾಂ ಕಮೀಟಿ ಚೇರಮನ್‌ ಎಂ.ಎಚ್‌. ಕೋಲಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.