ADVERTISEMENT

ಟ್ಯಾಂಕರ್ ಮಾಲೀಕರ ಧರಣಿ: ತುರ್ತು ಸಭೆ

ಬಾಡಿಗೆ ಪಾವತಿ ತಂದ ಸಂಕಷ್ಟ: ಜಿಲ್ಲಾಧಿಕಾರಿ ಭೇಟಿ ಇಂದು

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 12:44 IST
Last Updated 19 ಜೂನ್ 2018, 12:44 IST
ಗಜೇಂದ್ರಗಡ ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ನೇತೃತ್ವದಲ್ಲಿ ಸೋಮವಾರ ತುರ್ತು ಸಭೆ ನಡೆಯಿತು
ಗಜೇಂದ್ರಗಡ ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ನೇತೃತ್ವದಲ್ಲಿ ಸೋಮವಾರ ತುರ್ತು ಸಭೆ ನಡೆಯಿತು   

ಗಜೇಂದ್ರಗಡ: ಪಟ್ಟಣದ ಪುರಸಭೆ ಆವರಣದಲ್ಲಿ 7 ದಿನಗಳಿಂದ ನಡೆಯುತ್ತಿರುವ ಟ್ಯಾಂಕರ್ ಮಾಲೀಕರು ಹಾಗೂ ಚಾಲಕರ ಧರಣಿ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ಅವರು ಸೋಮವಾರ ತುರ್ತು ಸಭೆ ನಡೆಸಿದರು.

'ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನವರಿ ತಿಂಗಳಲ್ಲಿಯೇ ಗುತ್ತಿಗೆದಾರರಿಗೆ ಕೊಳವೆಬಾವಿ ಕೊರೆಸಲು ಹಾಗೂ ಪೈಪ್‌ಲೈನ್ ಜೋಡಣೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಈವರೆಗೂ ಮುಗಿದಿಲ್ಲ. ಪರಿಣಾಮ ಟ್ಯಾಂಕರ್ ಮೂಲಕ ನೀರು ಪೂರೈಸಿರುವ ಟ್ಯಾಂಕರ್ ಮಾಲೀಕರ ಬಾಡಿಗೆ ಹಣ ಪಾವತಿಸಲು ಹೆಣಗಾಡುವ ಸ್ಥಿತಿ ಬಂದಿದೆ' ಎಂದು ಕೆಲ ಪುರಸಭೆ ಸದಸ್ಯರು ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಟ್ಯಾಂಕರ್‌ ಬಾಡಿಗೆಗೆ ಪಡೆಯುವ ಸಂದರ್ಭದಲ್ಲಿಯೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈಗ ಸಮಸ್ಯೆ ಉಂಟಾಗಿದೆ ಎಂದು ತುರ್ತು ಸಭೆ ಕರೆಯಲಾಗಿದೆ’ ಸದಸ್ಯ ಅಶೋಕ ವನ್ನಾಲ ಖಾರವಾಗಿ ಹೇಳಿದರು.

ADVERTISEMENT

‘ಟ್ಯಾಂಕರ್ ಮಾಲೀಕರಿಗೆ ಯಾವ ಅನುದಾನ ಬಳಸಿ ₹50 ಲಕ್ಷಕ್ಕೂ ಅಧಿಕ ಹಣವನ್ನು ಪಾವತಿ ಮಾಡುತ್ತೀರಿ' ಎಂದು ಮುಖ್ಯಾಧಿಕಾರಿಯನ್ನು ಅವರು ಕೇಳಿದರು.

‘ವಾರ್ಡ್‌ಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣದಲ್ಲಿ ಟ್ಯಾಂಕರ್ ಮಾಲೀಕರಿಗೆ ನೀಡಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಸಭೆಗೆ ತಿಳಿಸಿದರು.

ಇದಕ್ಕೆ ಆಕ್ರೋಶಗೊಂಡ ಬಹುತೇಕ ಸದಸ್ಯರು ಈಗಾಗಲೇ ವಾರ್ಡ್‌ಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಟ್ಯಾಂಕರ್ ಬಾಡಿಗೆಗೆ ಹಣ ನೀಡುವುದು ಸರಿಯಲ್ಲ. ನಿಯೋಗ ತೆರಳಿ ಜಿಲ್ಲಾಧಿಕಾರಿ ಭೇಟಿ ಮಾಡೋಣ ಎಂದು ಸಲಹೆ ನೀಡಿದರು.

ಆಗ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಮೊಬೈಲ್‌ನಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ನೀಡಲು ಕಾಲಾವಕಾಶ ಕೋರಿದರು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಾರ್ಯಾಲಯಕ್ಕೆ ಬರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.

ಸಂಧಾನ ಸಭೆ ವಿಫಲ

ಟ್ಯಾಂಕರ್ ಮಾಲೀಕರು ಹಾಗೂ ಚಾಲಕರು ಅನಿರ್ಧಿಷ್ಟಾವಧಿ ಧರಣಿ ಮುಂದುವರಿದಿದ್ದು, ಧರಣಿ ಕೈಬಿಡುವಂತೆ ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ಹಾಗೂ ಮುಖ್ಯಾಧಿಕಾರಿ ಸೋಮವಾರ ನಡೆಸಿದ ಸಂಧಾನ ವಿಫಲವಾಯಿತು.

‘7 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕೂ ಅಹವಾಲು ಆಲಿಸಲು ಬರಲಿಲ್ಲ. ಈಗ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡುತ್ತಿರುವುದು ಸಮಂಜಸವಲ್ಲ’ ಎಂದು ಟ್ಯಾಂಕರ್ ಮಾಲೀಕರು ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಆಗ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ‘ಸಮಸ್ಯೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಮಂಗಳವಾರ ಭೇಟಿಗೆ ಸಮಯ ನೀಡಿದ್ದಾರೆ. ಅವಸರದ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಬಾರದು’ ಎಂದು ಮನವಿ ಮಾಡಿದರು.

ಧರಣಿಯಲ್ಲಿ ಶರಣಪ್ಪ ಚಳಗೇರಿ, ಬಸವರಾಜ ಬಂಕದ, ಭೀಮಣ್ಣ ತಳವಾರ, ಭಗವಂತಗೌಡ ಪಾಟೀಲ, ಹುಸೇನಸಾಬ ನಿಶಾನದಾರ, ಹನಮಂತಪ್ಪ ರಾಮಜಿ, ಪರಶುರಾಮ ಚಿಟಗಿ, ವೆಂಕಟೇಶ ಬಂಕದ, ರಾಜಶೇಖರ ಹೊಟ್ಟಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.