ADVERTISEMENT

ತುರ್ತು ಸಂದರ್ಭದಲ್ಲಿ ರಕ್ತದಾನ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 6:20 IST
Last Updated 16 ಜೂನ್ 2012, 6:20 IST

ಗದಗ: ಸಂಘ-ಸಂಸ್ಥೆಗಳು ರಕ್ತದಾನ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ  ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಸಲಹೆ  ನೀಡಿದರು.

ನಗರದ ರೋಟರಿ ಹಾಲ್‌ನಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ, ಏಡ್ಸ್ ಜನಜಾಗೃತಿ  ದಿನಾಚರಣೆ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲ ದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತವನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ ಮಾತನಾಡಿ, ಅಪಘಾತದಲ್ಲಿ ಗಾಯಗೊಂಡ 15 ರಿಂದ 30 ನಿಮಿಷಗಳಲ್ಲಿ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ರಕ್ತ ಹರಿದು ಹೋಗದಂತೆ ತಡೆಯಬಹುದು. ಪೋಲಿಸ್ ಇಲಾಖೆಯಲ್ಲೂ ಕೂಡಾ ರಕ್ತದಾನಿಗಳ ಮಾಹಿತಿ ಪಟ್ಟಿ ಇದೆ. ತುರ್ತು ಸಂದರ್ಭದಲ್ಲಿ ಸಿಬ್ಬಂದಿ ರಕ್ತದಾನ ಮಾಡುತ್ತಾರೆ. ಕಂಟ್ರೋಲ್ ರೂಂಗೆ  ಮಾಹಿತಿ ನೀಡಿದರೆ ಸಹಾಯ ಮಾಡಲಾಗುವುದು ಎಂದರು.

53 ಬಾರಿ ರಕ್ತದಾನ ಮಾಡಿದ ಪ್ರಾಂಕ್ಲೀನ್ ದಲಬಂಜನ ಮಾತನಾಡಿ, ನಗರದಲ್ಲಿ ಒಂದೆ ಬ್ಲಡ್ ಬ್ಯಾಂಕ್ ಇರುವುದರಿಂದ ರಕ್ತದ ಕೊರತೆ ಉಲ್ಬಣವಾಗಿದೆ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು. 

ಶ್ರೀಧರ ರಂಗ್ರೇಜ, ಶಂಕರ ಹಾನಗಲ್, ವಿನಿತಕುಮಾರ ಜಗತಾಪ, ರಾಜು ರೋಖಡೆ, ಸುನೀಲ ಮೊಮ್ಮಯಿ, ಡಾ. ಗಚ್ಚಿನಮಠ, ಕವಿತಾ ಕಾಶಪ್ಪನವರ ಮಾತನಾಡಿದರು.ರೆಡ್ ಕ್ರಾಸ್ ಸಂಸ್ಥೆ ಗೌರವ ಅಧ್ಯಕ್ಷ  ಶ್ರೀನಿವಾಸ ಹುಯಿಲಗೋಳ, ಉಪಾಧ್ಯಕ್ಷ ಡಾ. ಎಮ್.ಎಮ್.ಆಲೂರ, ಕಾರ್ಯದರ್ಶಿ ಡಾ. ಆರ್. ಎನ್. ಗೋಡಬೋಲೆ, ನಿಂಗರಾಜ ಬಗಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.