ADVERTISEMENT

ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ

ಸರಳ ವಿವಾಹ ಕಾರ್ಯಕ್ರಮದಲ್ಲಿ ತೋಂಟದ ಶ್ರೀಗಳ ಕರೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 8:04 IST
Last Updated 17 ಏಪ್ರಿಲ್ 2018, 8:04 IST

ಗಜೇಂದ್ರಗಡ: ‘ಇಲ್ಲಸಲ್ಲದ ಹೆಸರಿನಲ್ಲಿ ಇಂದು ಆರ್ಥಿಕವಾಗಿ ಸಬಲರಾಗಿರುವವರು ಮದುವೆಯ ಹೆಸರಿನಲ್ಲಿ ದುಂದು ವೆಚ್ಚವನ್ನು ಮಾಡುತ್ತಿದ್ದಾರೆ. ಇದಕ್ಕೆ ಸರಳ ವಿವಾಹಗಳು ಕಡಿವಾಣ ಹಾಕಿವೆ’ ಎಂದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ಬೆಣಚಮಟ್ಟಿ ಗ್ರಾಮದಲ್ಲಿ ಭಾನುವಾರ ನಡೆದ ಲಂಬಾಣಿ ಜನಾಂಗದ ಯುವಕ ಶಿವು ಚವ್ಹಾಣ ಅವರ ಸರಳ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೊಮ್ಮೆ ಅಲೆಮಾರಿಗಳಾಗಿದ್ದ ಲಂಬಾಣಿಗರು ನಿಜಕ್ಕೂ ಸಾಹಸಿಗಳು. ಅವರು ಪರಿಸರ ಪ್ರೇಮಿಗಳು ಆದರೆ ಇಂದು ಅವರನ್ನು ದುಷ್ಟರು ಎನ್ನುವ ರೀತಿಯಲ್ಲಿ ಕಡೆಗಣಿಸಲಾಗುತ್ತಿದೆ. ಆದರೆ ಅಂದಿನ ಸೇವಾಲಾಲರು ಸಸ್ಯಾಹಾರಿಗಳಾಗಿ ಅಂದಿನ ಗರಸಿ ಸಾಂಡ್ ಎಂಬ ಆಕಳಿನ ತಳಿಯನ್ನು ಉಳಿಸಿಕೊಂಡ ಬಗ್ಗೆ ದಾಖಲೆಗಳಿವೆ. ರಾಜಸ್ಥಾನದ ರಾಜ ಮನೆತನಕ್ಕೆ ಸೇರಿದ ಲಂಬಾಣಿಗರು ಅಡವಿಯನ್ನು ಸೇರಿ ಕಾಡು ಜನಾಂಗದವರಾಗಿ ಉಳಿದುಬಿಟ್ಟರು ಎಂದರು.

ADVERTISEMENT

ಇವರು ಕಾಡಿನಲ್ಲಿದ್ದರೂ ಸ್ವತಂತ್ರ, ಸರಳ, ಜ್ಯಾತ್ಯಾತೀತ, ಶ್ರಮಜೀವಿಗಳಾಗಿದ್ದರು. ಮದುವೆ ಬದುಕಿನ ಅಮೂಲ್ಯ ಘಟ್ಟ. ಅಂದು ಮದುವೆ ಎಂದರೆ ವಧುವಿನ ಕೊರಳಿಗೆ ಕೆಂಪು ದಾರವನ್ನು ಕಟ್ಟಿದರೆ ಮದುವೆ ಮುಗಿಯುತ್ತಿತ್ತು. ಆದರೆ ಇಂದು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಬ್ರಾಹ್ಮಣ, ಪುರೋಹಿತರ ಸಮ್ಮುಖದಲ್ಲಿ ಹೋಮ ಹವನ ಮಾಡಿ ಮಾಡುವ ಮದುವೆಗಳಲ್ಲಿ ಅರ್ಥವಿಲ್ಲ. ಇದನ್ನೇಲ್ಲ ಅರಿತು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಮದುವೆಯ ಹೆಸರಿನ್ಲಿ ದುಂದು ವೆಚ್ಚಗಳನ್ನು ನಿಲ್ಲಿಸಿ ಸರಳ ವಿವಾಹಗಳಿಗೆ ಆದ್ಯತೆಯನ್ನು ನೀಡುವ ಮೂಲಕ ಇತರಿಗೆ ಮಾದರಿಯಾಗಬೇಕಾಗಿದೆ. ಒಂದು ಕುಗ್ರಾಮದಲ್ಲಿ ಲಂಬಾಣಿ ಯುವಕ ಇಂತಹ ಸರಳ ವಿವಾಹಕ್ಕೆ ಮನಸ್ಸು ಮಾಡಿದ್ದು ಸಣ್ಣ ಸಾಧನೆಯಲ್ಲ’ ಎಂದು ಶ್ಲಾಘಿಸಿದರು.

ಹೋಮ, ಹವನ, ಮಂತ್ರ, ಬಾಜಾ ಭಜಂತ್ರಿಗಳ ಸದದ್ದಿಲ್ಲದೇ, ತುಂಬಾ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ನವ ದಂಪತಿಗಳಾದ ಶಿವು ಮತ್ತು ಶಶಿಕಲಾ ಅವರಿಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಪ್ರಮಾಣ ವಚನವನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈಕೋರ್ಟ ನ್ಯಾಯವಾದಿ ಅನಂತ ನಾಯಕ, ವಿಜಯಪುರದ ಸಾಹಿತಿ ಇಂದುಮತಿ ಲಮಾಣಿ ‘ಲಂಬಾಣಿ ಸಂಸ್ಕೃತಿ, ನಡೆ ನುಡಿಗಳು, ಇಂದಿನ ಜೀವನ ಶೈಲಿ’ ಕುರಿತು ಮಾತನಾಡಿದರು.

ಈ ವಿವಾಹವನ್ನು ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ ,ಡಿವೈಎಫ್ ಐ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದವು.

ಸಮಾರಂಭದಲ್ಲಿ ಬಾಲು ರಾಠೋಡ, ಪೀರು ರಾಠೋಡ, ರವೀಂದ್ರ ಹೊನವಾಡ, ಆರ್.ಕೆ.ಬಾಗವಾನ, ಮಾರುತಿ ಚಿಟಗಿ, ಕೆ.ಎಸ್.ಸಾಲಿಮಠ, ಬಸವರಾಜ ಹೊಳಿ, ಬಸವರಾಜ ಕೊಟಗಿ, ಫಯಾಜ್ ತೋಟದ, ಎಂ.ಎಸ್.ಸೋಂಪೂರ, ಶಿವಾಜಿ ಗಡ್ಡದ ವಧುವರರ ತಂದೆ ತಾಯಿಗಳು ಇದ್ದರು.

**

ಇಂದು ಕ್ರಿಕೆಟ್ ಆಟಗಾರರು ತಮ್ಮ ಆಟಗಳಲ್ಲಿ ಬಳಸುವ ಕೈಗವಸು, ಕಾಲು ರಕ್ಷಣೆ ಸರಕುಗಳು ನಮ್ಮ ಲಂಬಾಣಿ ಜನಾಂಗದ ನಕಲುಗಳು - ಇಂದುಮತಿ ಲಮಾಣಿ, ಸಾಹಿತಿ, ವಿಜಯಪುರ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.