ADVERTISEMENT

ದುರ್ಗಾದೇವಿ ಜಾತ್ರೆಯಲ್ಲಿ ಕುರಿಗಳ ಬಲಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 6:10 IST
Last Updated 2 ಮಾರ್ಚ್ 2011, 6:10 IST

ಗಜೇಂದ್ರಗಡ: ದೇವಸ್ಥಾನದ ಆವರಣದ ಒಂದು ಭಾಗದಲ್ಲಿ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡಿದ್ದ ದುರ್ಗಾಮಾತೆಯ ಮೂರ್ತಿಗೆ ಉಧೋ.. ಉಧೋ.. ಎನ್ನುತ್ತ ನೂರಾರು ಜನರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಯಿಂದ ಕುಣಿದಾಡುತ್ತಿದ್ದರೆ ಆವರಣದ ಇನ್ನೊಂದು ಕಡೆ ನೂರಾರು ಜನರು ಮೂಕಪ್ರಾಣಿಗಳಾದ ಆಡು, ಕುರಿ, ಟಗರು, ಕೋಳಿಗಳ  ಬಲಿ ನಡೆಯಿತು. ಮಂಗಳವಾರ ಇಂಥ ಘಟನೆಗಳಿಗೆ ಸಾಕ್ಷಿಯಾಗಿದ್ದು ಇಲ್ಲಿನ ದುರ್ಗಾದೇವಿ ಜಾತ್ರಾ ಮಹೋತ್ಸವ.

ಸ್ಥಳೀಯ ದುರ್ಗಾ ಮಂದಿರಕ್ಕೆ ರೋಣ ತಾಲ್ಲೂಕು, ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಅದರಲ್ಲಿ ಬಹುತೇಕ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಬಂದು ದೇವಿಗೆ ಪ್ರಾಣಿಬಲಿ ಕೊಡುತ್ತಾರೆ. ಈ ವರ್ಷ ದೇವಿಯ ವಾರವೆಂದು ಬಿಂಬಿತವಾಗಿರುವ ಮಂಗಳವಾರ ಜಾತ್ರೆ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳ ಮಾರಣಹೋಮ ನಡೆಯಿತು.

ಕಳೆದ ಐದು ವರ್ಷಗಳ ಹಿಂದೆ ಜಿಲ್ಲಾ ಆಡಳಿತ ದೇವಸ್ಥಾನದ ಆವರಣದೊಳಗೆ ಪ್ರಾಣಿಬಲಿ ಕೊಡುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಪ್ರಾಣಿ ಬಲಿ ಕೊಡದಂತೆ ದೇವಸ್ಥಾನದ ಟ್ರಸ್ಟ್ ಕಮಿಟಿ ಕೂಡ ಭಕ್ತರಲ್ಲಿ ಮನವಿ ಮಾಡಿಕೊಂಡಿತ್ತು. ಹೀಗಾಗಿ ಆ ವರ್ಷ  ದೇವಸ್ಥಾನದ ಒಳಗೆ ಪ್ರಾಣಿಬಲಿ ನಡೆಯಲಿಲ್ಲ. ಕೆಲವರು ಹೊರಗಡೆ ಕದ್ದುಮುಚ್ಚಿ ಬಲಿ ಕೊಟ್ಟಿದ್ದರು.

ಆದರೆ, ಪ್ರಸಕ್ತ ವರ್ಷ ಜಿಲ್ಲಾಡಳಿತ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗಟ್ಟಲು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗದ್ದರಿಂದ ಪೊಲೀಸರ ಕಣ್ಣೆದುರಿನಲ್ಲೇ ನೂರಾರು ಕುರಿ, ಟಗರು, ಆಡುಗಳ ಪ್ರಾಣ ಕಳೆದುಕೊಳ್ಳಬೇಕಾಯಿತು. ದೇವಿಗೆ ಬಲಿಕೊಡುವ ಮುನ್ನ ಭಕ್ತರು ಆ ಮುಗ್ದ ಜೀವಿಗಳನ್ನು ಅಲಂಕರಿಸಿಕೊಂಡು ಪಟ್ಟಣದ ಜೋಡು ರಸ್ತೆಯಲ್ಲಿ ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ನಡೆಸಿದರು. ಬಲಿಯ ನಂತರ ದೇವಸ್ಥಾನದ ಆವರಣದಲ್ಲಿಯೇ ಡಂಬುಗಳಿಗೆ ನೇತು ಹಾಕಿ ಕತ್ತರಿಸಿದರು.

‘ಜಾತ್ರೆ, ಉತ್ಸವಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧ ಮಾಡಿದ್ದರೂ ಇಷ್ಟು ನಿರ್ಭಯವಾಗಿ ಮೂಕಪ್ರಾಣಿಗಳ ಜೀವ ತೆಗೆಯುತ್ತಿರುವುದು ಅತ್ಯಂತ ನೋವಿನ ಸಂಗತಿ.   ಬಲಿಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆಡಳಿತ ಯಂತ್ರ ಹಿಂದೇಟು ಹಾಕುತ್ತಿರುವುದೇ ವರ್ಷದಿಂದ ವರ್ಷಕ್ಕೆ ಪ್ರಾಣಿಬಲಿ ಹೆಚ್ಚಲು ಕಾರಣ’ ಎಂದು ಜಾತ್ರೆಗೆ ಬಂದಿದ್ದ ಭಕ್ತ ಕಳಕಪ್ಪ, ರಾಮಣ್ಣ, ವಿದ್ಯಾರ್ಥಿ ರಮೇಶ ನೊಂದು ನುಡಿದರು.

‘ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಮ್ಮೆಲೆ ಬೇಡ ಎಂದರೆ ಹೇಗೆ? ಬ್ಯಾಟಿ ಹಾಕಿ ದೇವರಿಗೆ ನಮ್ಮ ಭಕ್ತಿ ಅರ್ಪಿಸುತ್ತೇವೆ. ನಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಹರಕೆ ಮಾಡಿಕೊಂಡಿದ್ದೇವೆ. ಅದರಂತೆ ಕುರಿಯನ್ನು ದೇವಿಗೆ ಅರ್ಪಿಸುತ್ತಿದ್ದೇವೆ. ಒಳ್ಳೆಯದಾಗಲಿ ಎಂದೇ ಇದನ್ನು ಮಾಡುತ್ತಿದ್ದೇವೆ.ಇದರಲ್ಲಿ ತಪ್ಪೇನಿಲ್ಲ’ ಎಂದು ದೇವಿಗೆ ಪ್ರಾಣಿ ಬಲಿಕೊಟ್ಟ ಹನಮವ್ವ, ಬರಮಪ್ಪ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು.

ಪಟ್ಟಣದ ದುರ್ಗಾದೇವಿ ಜಾತ್ರೆಯ ಮಾದರಿಯಲ್ಲಿಯೇ ಮಂಗಳವಾರ ಇಲ್ಲಿಗೆ ಸಮೀಪದ ಕೊಡಗಾನೂರ, ರಾಜೂರ ಗ್ರಾಮದ ನಡೆದ ದುರ್ಗಾದೇವಿ ಜಾತ್ರೆಯಲ್ಲಿಯು ಸಹ ಯಾವುದೇ ಅಡತಡೆಗಳಿಲ್ಲದೇ ಆಡು, ಕೋಳಿ, ಕುರಿ, ಟಗರುಗಳನ್ನು ಬಲಿ ಕೊಡುವ ಕಾರ್ಯ ನಿರ್ಭಯವಾಗಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.