ADVERTISEMENT

ನಿರಾಸೆ ತಂದ ಮಳೆ ಭವಿಷ್ಯ

ಚಂದ್ರಕಾಂತ ಬಾರಕೇರ
Published 21 ಏಪ್ರಿಲ್ 2013, 8:53 IST
Last Updated 21 ಏಪ್ರಿಲ್ 2013, 8:53 IST

ಉತ್ತಮ ಮಳೆಯ ಭವಿಷ್ಯಕ್ಕಾಗಿ ಕಾದಿದ್ದ ನೂರಾರು ಭಕ್ತರಿಗೆ ಯುಗಾದಿ ದಿನ ಆಘಾತ ಕಾದಿತ್ತು. ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ಕ್ಷೇತ್ರದಲ್ಲಿ ಅಂದು ನಡೆದ ಮಳೆ ಭವಿಷ್ಯ ನಿರಾಸೆ ಮೂಡಿಸಿದ್ದು ಭಕ್ತರಲ್ಲಿ ಮೂಡಿದ್ದ ಆಸೆಯ ಚಿಗುರು ಮುರುಟಿ ಹೋಯಿತು. ಕಳೆದ ಎರಡು ವರ್ಷ ಗಳಿಂದ `ದಕ್ಷಿಣ ಕಾಶಿ'ಯ ಮಳೆ ಭವಿಷ್ಯದಲ್ಲಿ ರೈತರು ಸೇರಿದಂತೆ ಭಕ್ತರಿಗೆ ಆಶಾದಾಯಕ ನುಡಿಯನ್ನು ಕೇಳಲು ಸಾಧ್ಯವಾಗಿತ್ತು.

ಈ ಬಾರಿ ಭವಿಷ್ಯ ನುಡಿಯುವ ಸಂದರ್ಭದಲ್ಲಿ ಅಲ್ಪ ಪ್ರಮಾಣದ ನೀರು ಚಿಮ್ಮಿದ ಪರಿಣಾಮ ನಾಡು ಮೂರನೇ ಬಾರಿ ಬರಕ್ಕೆ ತುತ್ತಾಗುವುದರಲ್ಲಿ ಸಂದೇಹವಿಲ್ಲ ಎಂಬ ಆತಂಕ ಭಕ್ತರನ್ನು ಕಾಡತೊಡಗಿದೆ. ಈ ಸಂದೇಶವು ಯುಗಾದಿ ಹಬ್ಬದಂದು ಬೆಳಿಗ್ಗೆಯೇ ಭಕ್ತ ಸಮೂಹಕ್ಕೆ ತೀವ್ರ ನಿರಾಸೆ ಉಂಟು ಮಾಡಿತು.

ಮಳೆ ಆಶ್ರಿತ ಕೃಷಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುವ ಈ ಭಾಗದ ಕೃಷಿಕರು ತಲೆಮಾರುಗಳಿಂದಲೂ ದಕ್ಷಿಣ ಕಾಶಿಯ ಮಳೆ ಭವಿಷ್ಯ ಕೇಳಿಸಿಕೊಂಟ ಬಳಿಕವೇ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ.

ನೀರಾವರಿ ಯೋಜನೆಗಳನ್ನೇ ಹೊಂದಿರದ ಗಜೇಂದ್ರಗಡ ತಾಲ್ಲೂಕು ಕಳೆದ ಎರಡು ವರ್ಷಗಳಿಂದ ಭೀಕರ ಬರವನ್ನು ಎದುರಿಸಿ ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸಿತ್ತು.

ಪ್ರಸಕ್ತ ವರ್ಷವಾದರೂ ಉತ್ತಮ ಮಳೆ ಸುರಿದು ಎರಡು ವರ್ಷಗಳ ಬರದ ಬೇಗೆಯನ್ನು ನೀಗಿಸಲು ವರುಣ ಸಾಥ್ ನೀಡುತ್ತಾನೆ ಎಂಬ ನಿರೀಕ್ಷೆಯೊಂದಿಗೆ ದಕ್ಷಿಣ ಕಾಶಿಯ  ಕಾಲ ಕಾಲೇಶ್ವರ ಕ್ಷೇತ್ರದಲ್ಲಿ ಜನರು ಸೇರಿದ್ದರು.

ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಕೃಷಿಕರಿಗೆ ಮಳೆ ಭವಿಷ್ಯ ಮೋಡದಿಂದ ಬಂದ `ಪ್ರಸಕ್ತ ವರ್ಷವೂ ಅಸಮರ್ಪಕ ಮಳೆ' ಎಂಬ ಭವಿಷ್ಯ ವಾಣಿ ಅತ್ಯಂತ ಬೇಸರ ತಂದಿತು, ಈ ಕಾರಣದಿಂದ ರೈತರು ನಿರಾಸೆಯೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.

ಕಳೆಗುಂದಿದ ರೈತರ ಉತ್ಸಾಹ:  ನಿರಂತರ ಬರದ ಮಧ್ಯೆಯೂ ಜಾನುವಾರುಗಳು ಹಾಗೂ ಜಮೀನುಗಳನ್ನು ಉಳಿಸಿಕೊಂಡಿದ್ದ ಕೃಷಿಕರು ಸಾಲ ಮಾಡಿ ಎರಡು ವರ್ಷಗಳ ಬರ ಪರಿಸ್ಥಿತಿ ನೀಗಿಸಿಕೊಂಡಿದ್ದರು. ಆದರೆ, ಎರಡು ವರ್ಷಗಳಿಂದ ತಾಲ್ಲೂಕಿನಾದ್ಯಂತ ತೀವ್ರ ಬರ ತಾಂಡವವಾಡಿದೆ. ಪ್ರಸಕ್ತ ವರ್ಷ ಸಮರ್ಪಕ ಮಳೆ ಸುರಿದು ಕೃಷಿಕರ ಸಂಕಷ್ಟ ನಿವಾರಣೆಯಾಗಬಹುದು ಎಂಬ ನಂಬಿಕೆಯಿಂದ ಇದ್ದ ಈ ಭಾಗದ ಕೃಷಿಕರಿಗೆ ಮಳೆ ಮೋಡದ ಭವಿಷ್ಯ ಕೊಡಲಿ ಪೆಟ್ಟು ನೀಡಿದೆ.

ಪ್ರಸಕ್ತ ವರ್ಷ ಅತ್ಯುತ್ತಮ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿಂದ ಜಮೀನುಗಳನ್ನು ಸ್ವಚ್ಛಗೊಳಿಸಿ, ಕೊಟ್ಟಿಗೆ ಗೊಬ್ಬರಗಳನ್ನು ಹಾಕಿ ವರುಣನ ಆಗಮವನ್ನು ಎದುರು ನೋಡುತ್ತಿದ್ದ ಅನ್ನದಾತನ ಉತ್ಸುಕತೆಗೆ ಕಾಲಕಾಲೇಶ್ವರ ಕ್ಷೇತ್ರದಲ್ಲಿನ ಮಳೆ ಭವಿಷ್ಯ ಕೃಷಿಕರ ಉತ್ಸುಕತೆಗೆ ತಣ್ಣೀರೆರಚಿದೆ.

ಸುರುಮಕ್ಕಿಂತ ಸುಣ್ಣ ಜಾಸ್ತಿ: ದೇವಸ್ಥಾನದ ಅಂತರ ಗಂಗೆಯ ಮೇಲ್ಭಾಗದಲ್ಲಿ ಯಾರೂ ಹತ್ತಲಾಗದ ಸ್ಥಳದಲ್ಲಿ ಸುಣ್ಣ-ಸುರುಮ ತಾನೇ ಹಚ್ಚಿಕೊಳ್ಳುತ್ತದೆ ಎಂಬ ನಂಬಿಕೆ ಇಲ್ಲಿನವರದ್ದು. ಯುಗಾದಿ ದಿನದ ಸಂಜೆ ಭಕ್ತರು ದೇವಸ್ಥಾನದ ಒಂದೆಡೆ ಸುಣ್ಣ-ಸುರುಮ ಇಟ್ಟು ಬರುತ್ತಾರೆ. ಬೆಳಗಾಗುವಷ್ಟರಲ್ಲಿ ಗುಡ್ಡದ ಪಡಿಯಲ್ಲಿ ಸುಣ್ಣ-ಸುರುಮದ ಕುರುಹು ಕಾಣಿಸುತ್ತದೆ.  ಸುಣ್ಣ ಬಹಳ ಲೇಪನವಾಗಿದ್ದರೆ ಎರೆ ಭೂಮಿಯಲ್ಲಿ ಉತ್ತಮ ಬೆಳೆ. ಸುರುಮ ಹೆಚ್ಚಿದ್ದರೆ ಮಸಾರಿ ಭೂಮಿಯಲ್ಲಿ ಅಧಿಕ ಬೆಳೆ ಬರುತ್ತದೆ ಎಂಬುದು ಈ ಭಾಗದ ರೈತರ ನಂಬಿಕೆ.
ಕಳೆದ ವರ್ಷ ಸುಣ್ಣ ಹೆಚ್ಚು ಪ್ರಮಾಣದಲ್ಲಿ ಲೇಪನ ಗೊಂಡಿತ್ತು. ಆದರೆ, ಸುರುಮ ಅತ್ಯಲ್ಪ ಪ್ರಮಾಣದಲ್ಲಿ ಲೇಪನ ವಾಗಿತ್ತು. ಆದರೆ, ಪ್ರಸಕ್ತ ವರ್ಷವೂ ಸುಣ್ಣ ಹೆಚ್ಚು ಪ್ರಮಾಣದಲ್ಲಿ ಲೇಪನವಾಗಿದೆ. ಸುರುಮ ಅಲ್ಪ ಪ್ರಮಾಣದಲ್ಲಿ ಲೇಪನಗೊಂಡಿರುವುದರಿಂದ ಸಂಕಷ್ಟ ಎದುರಾಗಲಿದೆ ಎಂಬ ಆತಂಕ ರೈತರನ್ನು ಕಾಡತೊಡಗಿದೆ.

ಪ್ರಸಕ್ತ ವರ್ಷ ಎರಿ (ಕಪ್ಪು ಮಣ್ಣಿನ) ಪ್ರದೇಶದಲ್ಲಿ ಉತ್ತಮ ಬೆಳೆ ದೊರೆಯುತ್ತದೆ. ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶದಲ್ಲಿ ಬೆಳೆ ಅಷ್ಟಕಷ್ಟೇ ಎಂಬುದನ್ನು ಸುಣ್ಣ-ಸುರುಮ ಭವಿಷ್ಯ ಖಚಿತ ಪಡಿಸಿದೆ ಎನ್ನುತ್ತಾರೆ ಕಾಲಕಾಲೇಶ್ವರ ಗ್ರಾಮದ ರೈತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.