ADVERTISEMENT

ಪಡಿತರ ಗೊಂದಲ: ನಾಗರಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 10:15 IST
Last Updated 18 ಜುಲೈ 2012, 10:15 IST

ಗಜೇಂದ್ರಗಡ: ತಾಲ್ಲೂಕಿನಲ್ಲಿ ಹಲವು ದಶಕಗಳಿಂದಲ್ಲೂ ತಲೆದೋರಿರುವ ಪಡಿತರ ಚೀಟಿ ಹಾಗೂ ಪಡಿತರ ಆಹಾರ ಧಾನ್ಯ ವಿತರಣೆ ಗೊಂದಲಕ್ಕೆ ಶಾಶ್ವತ ಪರಿಹಾರ ದೊರಕಿಸುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾದ ಪರಿಣಾಮ ನಾಗರಿಕರು ಪರದಾಡುವಂತಾಗಿದೆ.

ಕಳೆದ ವರ್ಷದಿಂದ ನಿರಂತರ ಬರದ ದವಡೆಗೆ ಸಿಲುಕಿ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಸಮರ್ಪಕ ಉದ್ಯೋಗವಿಲ್ಲ. ಹೀಗಾಗಿ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಇದೆಲ್ಲದರ ಮಧ್ಯೆ ಸರ್ಕಾರ ಪ್ರತಿ ತಿಂಗಳು ವಿತರಿಸುವ ಆಹಾರ ಧಾನ್ಯಗಳಿಂದಲ್ಲಾದರೂ ಒಪ್ಪತ್ತಿನ ಗಂಜಿ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಮುಗ್ದ ಜನತೆಗೆ, ಆಹಾರ ಇಲಾಖೆ ತಾಲ್ಲೂಕಿನ ಸಾವಿರಾರು ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಮೂಲಕ ನಾಗರಿಕರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ.

ಒಟ್ಟು ಪಡಿತರದಾರರು:  2010-11 ರಲ್ಲಿ ತಾಲ್ಲೂಕಿನಲ್ಲಿ 4,0012 ಬಿಪಿಎಲ್, 11,516 ಎಪಿಎಲ್ ಹಾಗೂ 7,693 ಅಂತೋದಯ ಪಡಿತರರಿದ್ದರು. 2011-12 ರಲ್ಲಿ 3,1002 ಬಿಪಿಎಲ್, 15,950 ಎಪಿಎಲ್ ಹಾಗೂ 7,693 ಅಂತೋದಯ ಪಡಿತರ ಚೀಟಿದಾರರಿದ್ದರು. ಆದರೆ, ಸರ್ಕಾರ ಹೊಸ ಪಡಿತರ ಚೀಟಿಗಳನ್ನು ನೀಡುವ ನೆಪದಲ್ಲಿ 9,010 ಬಿಪಿಎಲ್, 7,320 ಎಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿತು. ಪಡಿತರ ಚೀಟಿ ನೀಡುವ ನೆಪದಲ್ಲಿ ರದ್ದುಗೊಳಿಸಿರುವ ಪಡಿತರ ಚೀಟಿದಾರರಿಗೆ ಇದುವರೆಗೂ ನೂತನ ಪಡಿತರ ಚೀಟಿಗಳನ್ನು ನೀಡದಿರುವುದು ತಾಲ್ಲೂಕಿನಲ್ಲಿ ಪಡಿತರ ಆಹಾರ ವಿತರಣೆಯಲ್ಲಿ ತೀವ್ರ ಗೊಂದಲವನ್ನುಂಟು ಮಾಡಿದೆ.

ನ್ಯಾಯಬೆಲೆ ಅಂಗಡಿಗಳ ಕೊರತೆ: ಪಡಿತರ ಚೀಟಿ ಗೊಂದಲಕ್ಕೆ ಮುಕ್ತಿ ದೊರೆಯದಿರುವುದು ಒಂದೆಡೆಯಾದರೆ, ಇರೋ ಅಲ್ಪ ಪ್ರಮಾಣದ ಪಡಿತರ ಚೀಟಿದಾರರಿಗೆ ಸಮರ್ಪಕ ಆಹಾರ ಧಾನ್ಯ ಒದಗಿಸಲು ಅಗತ್ಯ ನ್ಯಾಯಬೆಲೆ ಅಂಗಡಿಗಳಿಲ್ಲ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 72 ಇಲಾಖೆಯ ನ್ಯಾಯ ಬೆಲೆ ಅಂಗಡಿಗಳಿವೆ. ಪಟ್ಟಣ ಪ್ರದೇಶಗಳಲ್ಲಿ 23 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. 

 ಹೀಗಾಗಿ ಸದ್ಯ ಇರೋ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಸಮರ್ಪಕ ಪಡಿತರ ಆಹಾರ ಧಾನ್ಯಗಳು ಹಾಗೂ ಸೀಮೆ ಎಣ್ಣೆ ದೊರೆಯುತ್ತಿಲ್ಲ ಎಂಬ ಕೊರಗು ಅರ್ಹ ಪಡಿತರದಾರರದ್ದು. ಸದ್ಯದ ತಾಲ್ಲೂಕಿನ ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಪ್ರದೇಶದಲ್ಲಿ 144 ಹಾಗೂ ಪಟ್ಟಣ ಪ್ರದೇಶಗಳಲ್ಲಿ 46 ನ್ಯಾಯಬೆಲೆ ಅಂಗಡಿಗಳಿರಬೇಕು. ಆದರೆ, ಪಡಿತರ ಚೀಟಿದಾರರ ಸಂಖ್ಯೆಯ ಕನಿಷ್ಠ ಪ್ರಮಾಣದ ಅಂಗಡಿಗಳಿಲ್ಲದಿರುವುದು ಪಡಿತರ ಪಡೆಯುವವರ ಪರದಾಟಕ್ಕೆ ಕಾರಣವಾಗಿದೆ.

2010-11ನೇ ಸಾಲಿನಲ್ಲಿ ತಾಲ್ಲೂಕಿಗೆ 5,80,248 ಕ್ವಿಂಟಲ್ ಅಕ್ಕಿ, 93,932 ಕ್ವಿಂಟಲ್ ಗೋಧಿ ಸರಬರಾಜಾಗಿತ್ತು. 2011-12ನೇ ಸಾಲಿನಲ್ಲಿ 4,46,014 ಕ್ವಿಂಟಲ್ ಅಕ್ಕಿ, 69,739 ಕ್ವಿಂಟಲ್ ಗೋಧಿ ವಿತರಿಸಲಾಗಿದೆ. ಅಂದರೆ, 1,34,234 ಕ್ವಿಂಟಲ್ ಅಕ್ಕಿ, 24,193 ಕ್ವಿಂಟಲ್ ಗೋಧಿ ಕ್ಷೀಣಿಸಿದೆ. ಇಲಾಖೆಯ ಈ ಕಡಿತದಿಂದಾಗಿ ಪಡಿತರರ ಬದುಕು ಅತಂತ್ರವಾಗಿದೆ.

  ತತ್ಕಾಲಿಕ ಪಡಿತರಕ್ಕೆ ಮನ್ನಣೆ ಇಲ್ಲ: 2008 ರಲ್ಲಿ ಪಡಿತರ ಚೀಟಿದಾರರಿಗೆ ತಾತ್ಕಲಿಕ ಪಡಿತರ ಚೀಟಿಗಳನ್ನು ವಿತರಿಸಿದ ಇಲಾಖೆ ನಂತರದ ದಿನಗಳಲ್ಲಿ ಶಾಶ್ವತ ಕಾರ್ಡ್‌ಗಳನ್ನು ವಿತರಿಸಲು ಮುಂದಾಯಿತು. ಆದರೆ, ಶೇ.92 ರಷ್ಟು ನಾಗರಿಕರಿಗೆ ಈವರೆಗೂ ಶ್ವಾಶತ ಪಡಿತರ ಕಾರ್ಡ್‌ಗಳನ್ನು ಇಲಾಖೆ ಸಮರ್ಪಕವಾಗಿ ವಿತರಿಸಿಲ್ಲ.  

  ಒಂದೆಡೆ ಶಾಶ್ವತ ಪಡಿತರ ಚೀಟಿ ಪಡೆಯಲು ನಾಗರಿಕರು ಹರ ಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಸಾಮೂಹಿಕ ನ್ಯಾಯದಡೆ ನಾಗರಿಕರಿಗೆ ಪಡಿತರ ಆಹಾರ ಧಾನ್ಯ ವಿತರಿಸುವುದಾಗಿ ಹೇಳಿದ ಇಲಾಖೆ ಮಾತ್ರ ಈ ವರೆಗೂ ನಾಗರಿಕರಿಗೆ ಪಡಿತರ ಆಹಾರ ಧಾನ್ಯ ವಿತರಿಸಲು ಮುಂದಾಗಿಲ್ಲ.  ತಾಲ್ಲೂಕಿನ ಪಡಿತರ ಗೊಂದಲಕ್ಕೆ ಶೀಘ್ರದಲ್ಲಿಯೇ ಮುಕ್ತಿ ದೊರೆಯಲಿದೆ ಎಂದು ತಾಲ್ಲೂಕು ಆಹಾರ ನಿರೀಕ್ಷಕ ಎ.ಎಂ.ಲಕ್ಕುಂಡಿ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.