ADVERTISEMENT

ಪರಿಕ್ಕರ್‌ ಪತ್ರ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 9:11 IST
Last Updated 22 ಡಿಸೆಂಬರ್ 2017, 9:11 IST
ಗುರುವಾರ ಗದುಗಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್‌.ಕೆ ಪಾಟೀಲ ಮಾತನಾಡಿದರು
ಗುರುವಾರ ಗದುಗಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್‌.ಕೆ ಪಾಟೀಲ ಮಾತನಾಡಿದರು   

ಗದಗ: ‘ಮಹದಾಯಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿವರ್ತನಾ ಯಾತ್ರೆಗೆ ಜನರನ್ನು ಸೇರಿಸಲು ಬಿ.ಎಸ್‌.ಯಡಿಯೂರಪ್ಪ ಅವರು ಕಳೆದ ಒಂದು ತಿಂಗಳಿಂದ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಹೇಳಿಕೊಂಡು ತಿರುಗುತ್ತಿದ್ದರು. ಇದರ ಹಿಂದೆ ಯಾವುದೇ ಪ್ರಾಮಾಣಿಕ ಪ್ರಯತ್ನ ಇರಲಿಲ್ಲ. ಪರಿಕ್ಕರ್‌ ಪತ್ರ ರಾಜ್ಯದ ಜನತೆಯ ನಿರೀಕ್ಷೆಯನ್ನು ಸಂಪೂರ್ಣ ಹುಸಿ ಮಾಡಿದೆ. ಈ ಪತ್ರಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲ. ಬಿಜೆಪಿಯವರ ರಾಜಕೀಯ ನಾಟಕದಿಂದ ಕರ್ನಾಟಕಕ್ಕೆ ಲಭಿಸಿದ್ದು ಶೂನ್ಯ’ ಎಂದು ದೂರಿದರು.

‘ಬುಧವಾರ ದೆಹಲಿಯಲ್ಲಿ ನಡೆದ ಬಿಜೆಪಿ ವರಿಷ್ಠರ ಸಭೆಯಲ್ಲಿ ಈ ಕುರಿತು ನಿರ್ಣಯ ಆಗಿದ್ದರೆ ಪರಿಕ್ಕರ್‌ ಪತ್ರದಲ್ಲಿ ಅದರ ಉಲ್ಲೇಖ ಇರಬೇಕಿತ್ತು. ಆದರೆ, ಪತ್ರದಲ್ಲಿ ಏನೂ ಇಲ್ಲ. ಕೇವಲ ರಾಜಕೀಯ ನಾಟಕವಾಡಿದ್ದಾರೆ’ ಎಂದರು.

ADVERTISEMENT

‘ಕಳಸಾ–ಬಂಡೂರಿ ಯೋಜನೆಯನ್ನು ಹುಟ್ಟುಹಾಕಿದ್ದು ಕಾಂಗ್ರೆಸ್‌ನವರು. ಮಹದಾಯಿ ವಿಷಯದಲ್ಲಿ ನ್ಯಾಯಮಂಡಳಿ ತೀರ್ಪಿನವರೆಗೆ ಕಾಯುತ್ತೇವೆ. ರಾಜಕೀಯ ಹಿತಾಸಕ್ತಿ ಬದಿಗಿರಿಸಿ ಪ್ರಧಾನಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು’ ಎಂದು ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.