ADVERTISEMENT

ಪರಿಸರ ಸಂರಕ್ಷಣೆಗೆ ಹಮ್ಮಿಗಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 5:30 IST
Last Updated 23 ಮಾರ್ಚ್ 2011, 5:30 IST

ಗದಗ: ಯುವಕರು ದುಶ್ಚಟಗಳಿಂದ ದೂರವಿದ್ದು, ಪರಿಸರ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಾಧ್ಯಾಪಕ ಕೆ.ಎ. ಹಮ್ಮಿಗಿ ಸಲಹೆ ನೀಡಿದರು.ತಾಲ್ಲೂಕಿನ ಕೋಟುಮಚಗಿ ಗ್ರಾಮದಲ್ಲಿ ಇತ್ತೀಚೆಗೆ ಸಮಾಜ ಕಾರ್ಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆ, ಕಂದಾಚಾರಗಳು ಇನ್ನೂ ಜೀವಂತವಾಗಿವೆ. ಜನರಲ್ಲಿ ಶಿಕ್ಷಣ, ಸಮಾಜಿಕ ಪ್ರಜ್ಞೆ ಮೂಡಿಸಲು ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು. ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಯುವಕರು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಗ್ರಾಮೀಣ ಸಮಸ್ಯೆಗಳಿಗೆ ಸ್ಪಂಧಿಸಿ ಪರಿಹಾರ ಸೂಚಿಸಬೇಕು. ಸದೃಢ ಯುವಕರಿಂದ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.

ಶ್ರೀಧರ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವೆ, ದೇಶ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಸಾಮಾಜಿಕ ಪ್ರಜ್ಞೆಯೊಂದಿಗೆ ವರ್ತಮಾನದ ಆಗು ಹೋಗುಗಳ ಸಮಗ್ರ ಮಾಹಿತಿ ಅರಿತುಕೊಂಡಿರಬೇಕು. ಕಥೆ, ಕಾದಂಬರಿ, ಕವನ ಸಂಕಲನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರೊಂದಿಗೆ ಸಮಾಜ ಸೇವೆ, ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಕರೆ ನೀಡಿದರು.

ಪ್ರಾಚಾರ್ಯ ಸಿ.ಎಸ್. ಬೊಮ್ಮನಹಳ್ಳಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಾಲಾಕ್ಷಯ್ಯ ಬಳಿಗೇರಮಠ ಅಧ್ಯಕ್ಷತೆ ವಹಿಸಿದ್ದರು. ಹುಸೇನಸಾಬ್ ಅತ್ತಾರ, ಯಲ್ಲಪ್ಪ ಮುತ್ತಾಳ, ಎಸ್.ಎಚ್. ಯಾವಗಲ್, ಎಲ್.ಎಲ್. ದೊಡ್ಡಮನಿ, ಗಂಗಾಧರ ಪಿಡ್ಡನಗೌಡರ, ಯಲ್ಲಪ್ಪ ಬೂನಕೊಪ್ಪ, ಆರ್.ಎನ್. ಸಂಕನಗೌಡರ, ರವಿ ಮಾದರ ಮತ್ತಿತರರು ಹಾಜರಿದ್ದರು. ಜಿ.ಎಸ್. ಗೌಡರ ಸ್ವಾಗತಿಸಿದರು. ಆರ್.ಎಂ. ಹೊಸಮನಿ ಪ್ರಾರ್ಥಿಸಿದರು. ಬಿ.ವೈ. ಬೇವಿನಮರದ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರಕಾಶ ಗಾಣಿಗೇರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.