ADVERTISEMENT

ಪೋಸ್ಕೊ ಹೋದರೂ, ತೀರದ ರೈತರ ಪಾಡು!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:40 IST
Last Updated 1 ಆಗಸ್ಟ್ 2013, 6:40 IST

ಮುಂಡರಗಿ: ತಾಲ್ಲೂಕಿನ ಹಳ್ಳಿಗುಡಿ, ಜಂತ್ಲಿ-ಶಿರೂರ, ಹಳ್ಳಿಕೇರಿ, ವೆಂಕಟಾಪುರ ಮೊದಲಾದ ಗ್ರಾಮಗಳ ಫಲವತ್ತಾದ ಕೃಷಿ ಜಮೀನಿನಲ್ಲಿ ಬೃಹತ್ ಕೈಗಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದ ವಿದೇಶಿ ಮೂಲದ ಪೋಸ್ಕೊ ಕಂಪೆನಿ ರಾಜ್ಯದಿಂದ ಗಂಟು ಮೂಟೆ ಕಟ್ಟಿದೆಯಾದರೂ, ಕೆಲವು ತಾಂತ್ರಿಕ ಕಾರಣಗಳಿಂದ ಈ ಭಾಗಗಳ ರೈತರೂ ಇನ್ನೂ ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕಿನ ಹಳ್ಳಿಗುಡಿ, ಜಂತ್ಲಿ-ಶಿರೂರ ಮೊದಲಾದ ಕೆಲವು ಗ್ರಾಮಗಳ 3382ಎಕರೆ ಕೃಷಿ ಜಮೀನನ್ನು ಕೆಐಎಡಿಬಿ ಅಡಿಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರ 2010 ಅಕ್ಟೋಬರ್ 21ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ನಿಯಮಾನುಸಾರ ಭೂಸ್ವಾಧೀನಕ್ಕೊಳಪಟ್ಟ  ಜಮೀನು 2010ರಿಂದಲೂ ಕೆಐಎಡಿಬಿ ಹೆಸರಿನಲ್ಲಿದೆ.

ಸರ್ಕಾರದ ರಾಜ್ಯ ಪತ್ರದಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ಪ್ರಕಟಣೆ ಒಮ್ಮೆ ಹೊರಬಿದ್ದರೆ ನಿಯಮಾನುಸಾರ ಭೂಸ್ವಾಧೀನ ಪಡಿಸಿಕೊಂಡ ಜಮೀನನ್ನು ರೈತರು ಬೇರೆಯವರಿಗೆ ಮಾರಾಟ ಮಾಡಲು, ಗುತ್ತಿಗೆ ನೀಡಲು, ಪರಬಾರೆ ಮಾಡಲು ಬರುವುದಿಲ್ಲ.

ಜಮೀನಿನ ಮೇಲೆ ಈಗಾಗಲೇ ಕೆಐಎಡಿಬಿ ಹೆಸರಿರುವುದರಿಂದ ಅಂತಹ ಜಮೀನುಗಳ ಆಧಾರದ ಮೇಲೆ ರೈತರಿಗೆ ಯಾವುದೆ ಬ್ಯಾಂಕ್ ಸಾಲ ನೀಡುವುದಿಲ್ಲ. ಹೀಗಾಗಿ ಈ ಭಾಗದ ರೈತರು ಬೆಳೆ ಸಾಲ ಸೌಲಭ್ಯ, ಬೆಳೆವಿಮೆ, ಬೆಳೆಸಾಲ ಮನ್ನಾಗಳಂತಹ ಯೋಜನೆಗಳಿಂದ ಸಂಪೂರ್ಣವಾಗಿ ವಂಚಿತರಾಗಬೇಕಿದೆ.

ಪೋಸ್ಕೊ ಈ ರಾಜ್ಯದಿಂದಲೇ ಹೊರಟು ಹೋಗಿದ್ದರೂ ಸರ್ಕಾರ ಹಾಗೂ ಕೆಐಎಡಿಬಿಗಳು ವಿಧಿಸಿದ್ದ  ನಿರ್ಬಂಧಗಳು ಈಗಲೂ ಮುಂದುವರಿದಿವೆ. ಇದರಿಂದಾಗಿ ಈ ಭಾಗಗಳ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಸರ್ಕಾರ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪುನಃ ಡಿನೋಟಿಫಿಕೇಶನ್ ಮಾಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕಿದೆ. ಹಾಗಾದಾಗ ಮಾತ್ರ ರೈತರ ಜಮೀನ ಹಕ್ಕು ರೈತರಿಗೆ ದೊರೆತಂತಾಗುತ್ತದೆ.

ಪೋಸ್ಕೊ ಕಂಪೆನಿಯನ್ನು ಹೊಡೆದೋಡಿಸಲು ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಮತ್ತು ಮುಂಡರಗಿಯ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ರೈತರು ಹಲವು ತಿಂಗಳ ಕಾಲ ಪೋಸ್ಕೊ ಕಂಪೆನಿ ಹಾಗೂ ಸರ್ಕಾರದ ವಿರುದ್ಧ ಸುದೀರ್ಘ ಹೋರಾಟ ಮಾಡಿದ್ದರು. `ಪೋಸ್ಕೊ ವಿರುದ್ಧ ಹೋರಾಟ ಮಾಡಿ ಫಲವತ್ತಾದ ಜಮೀನನ್ನು ಉಳಿಸಿಕೊಳ್ಳಲಾಗಿದೆ.

ರೈತರ ಪರವಾಗಿ ಸರ್ಕಾರ ತನ್ನ ಹಂತದಲ್ಲಿ ಮಾಡಬೇಕಾಗಿರುವ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿ ರೈತರ ಜಮೀನಿನ ಮೇಲೆ ಇರುವ ಎಲ್ಲ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು' ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

`ಪೋಸ್ಕೊ ವಿಚಾರದಲ್ಲಿ ಸರಕಾರ ವಿನಾಕಾರಣ ರೈತರ ಹಾದಿ ತಪ್ಪಿಸಿದ್ದಲ್ಲದೇ ಈಗ ರೈತರ ಪಹಣಿಗಳ ಮೇಲಿನ ಕೆಐಎಡಿಬಿ ಹೆಸರನ್ನು ಹಾಗೆಯೇ ಉಳಿಸಿ ರೈತರ ಕೈ ಕಟ್ಟಿ ಹಾಕಿದೆ. ತಕ್ಷಣ ಸರಕಾರ ಈ ಸಮಸ್ಯೆಯನ್ನು ಬಗೆ ಹರಿಸದಿದ್ದಲ್ಲಿ ಈ ಭಾಗದ ರೈತರು ಮತ್ತೊಮ್ಮೆ ಹೋರಾಟ ಕೈಗೊಳ್ಳಬೇಕಾದೀತು' ಎಂದು ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ ಎಚ್ಚರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.