ADVERTISEMENT

ಪ್ರಳಯದ ಭಯ: ಗುಳೆ ಹೋದವರು ಮರಳಿ ಗೂಡಿಗೆ..

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 5:30 IST
Last Updated 19 ಮಾರ್ಚ್ 2011, 5:30 IST

ಗಜೇಂದ್ರಗಡ: ‘ಅಲ್ಲೆಲ್ಲೋ ದೂರದ ಜಪಾನ್ ದೇಶದಲ್ಲಿ ಸುನಾಮಿ ಹೊಡ್ಡು ಜನ್ರು ಸತ್ತಿದ್ದಾರಂತೆ. ಶನಿವಾರ ಹುಣ್ಣಿಮೆ ದಿವ್ಸ್ ನಮ್ಮಲ್ಲೂ ಪ್ರಳಯ ಆಗೋದು ಗ್ಯಾರಂಟಿಯಂತ ಜ್ಯೋತಿಷಿಗಳು ಹೇಳಿದ್ದಾರಂತೆ! ಹಿಂಗಾಗಿ ಜೀವ ಭಯದಿಂದ ಗಂಟು ಮೂಟೆ ಕಟ್ಗೊಂಡು ನಾವು ನಮ್ಮೂರ್ಕಡೆ ಹೊಂಟೇವಿ. ಇದ್ರ ಅಲ್ಲೇ ಇರ್ತೇವಿ. ಸತ್ರೂ ಅಲ್ಲೇ ಸಾಯ್ತೀವಿ’-ಹೀಗೆ ಕೊನೆ ಇಲ್ಲದ ಅಂತೆ ಕಂತೆಗಳ ಮಾತಿನ ಗದ್ದಲ ನಡೆದಿದ್ದು ಶುಕ್ರವಾರ ಬೆಳಗಿನ ಜಾವ ಇಲ್ಲಿನ ಬಸ್ ನಿಲ್ದಾಣದಲ್ಲಿ.ಪಟ್ಟಣದ ಸುತ್ತಮುತ್ತಲ ಗ್ರಾಮಗಳ ಸಾಕಷ್ಟು ಸಂಖ್ಯೆ ಜನರು ಹೊಟ್ಟೆ ತುಂಬಿಸಿಕೊಳ್ಳಲು ಕುಟುಂಬ ಸಮೇತ ದೂರದ ಮಂಗಳೂರ, ಕಾರವಾರ, ಗೋವಾಗಳಿಗೆ ಕೂಲಿ ಹುಡುಕಿಕೊಂಡು ಗುಳೆ ಹೋಗಿದ್ದರು.

ಇದೀಗ ಜ್ಯೋತಿಷಿಗಳು ಸೃಷ್ಟಿಸುತ್ತಿರುವ ಆತಂಕದ ಪರಿಣಾಮವಾಗಿ ವಿನಾಕಾರಣವಾಗಿ ಮೂಢನಂಬಿಕೆಗಳಿಗೆ ಗಂಟುಬಿದ್ದು ಗುಳೆ ಹೋಗಿದ್ದ ಬಹುತೇಕ ಜನರು ಪ್ರಳಯದ ಭೀತಿಯಿಂದ ಮರಳಿ ತಮ್ಮ ತಮ್ಮ ಊರುಗಳಿಗೆ ಬರುತ್ತಿದ್ದಾರೆ. ಸಮೀಪದ ಶಾಂತಗೇರಿ, ನಾಗರಸಕೊಪ್ಪ ತಾಂಡಾ, ಬೈರಾಪೂರ, ಜೀಗೇರಿ, ಸೇರಿದಂತೆ ಕುಷ್ಟಗಿ, ಬದಾಮಿ, ಹುನಗುಂದ, ಯಲಬುರ್ಗಾ ತಾಲ್ಲೂಕಿನ ಹತ್ತಾರು ಗ್ರಾಮಗಳ ನೂರಾರು ಜನರು ಮಂಗಳೂರ, ಗೋವಾ ನಗರಗಳಿಂದ ಶುಕ್ರವಾರ ಬೆಳಿಗ್ಗೆ ತಂಡ ತಂಡವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂದೀಳಿದರು.

‘ಮಂಗಳೂರಿನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದೇವು. ದಿನಕ್ಕೆ 200ರಿಂದ 205 ರೂಪಾಯಿ ಕೂಲಿ ಸಿಗುತ್ತಿತ್ತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಶನಿವಾರ ಸುನಾಮಿ ಉಂಟಾಗುತ್ತದೆ ಎಂಬ ಭಯದ ಮಾತು ಕೇಳಿ ಬಂದವು. ಅಲ್ಲಿ ನಾವು ಸಮುದ್ರದ ಸಮೀಪದಲ್ಲಿಯೇ ಕೆಲಸ ಮಾಡುತ್ತಿರುವುದರಿಂದ ಜೀವ ಭಯದಿಂದ ಮರಳಿ ಬಂದೇವು’ ಎಂದು ಶಾಂತಗೇರಿ ಗ್ರಾಮದ ಬರಮಪ್ಪ ಹುಸಲಕೊಪ್ಪ, ಮಹಮ್ಮದ ಜಾಲಿಹಾಳ ಹೇಳಿದರು.

ಹುನಗುಂದ ತಾಲ್ಲೂಕಿನ ಜಾಲಕಮಲದಿನ್ನಿ ಗ್ರಾಮದ 80ಜನರು ಮಂಗಳೂರಿಗೆ ಗುಳೆ ಹೋಗಿದ್ದರು. ಅದರಲ್ಲಿ 40ಜನರ ಒಂದು ತಂಡ ಇದೀಗ ಪ್ರಳಯದ ಭೀತಿಯಿಂದ ಗಂಟು ಮೂಟೆ ಕಟ್ಟಿಕೊಂಡು ಮರಳಿ ಬಂದಿದ್ದಾರೆ. ‘ನಮ್ಮ ಗುಂಪಿನಲ್ಲಿ ಟಿ.ವಿ. ಇತ್ತು. ಅದರಲ್ಲಿ ಜ್ಯೋತಿಷಿಗಳು ಶನಿವಾರ ಪ್ರಳಯ ಆಗುತ್ತೇ. ಸಾವು ನೋವು ಆಗುತ್ತೆ ಎಂದು ಹೇಳಿದ್ದನ್ನು ಕೇಳಿ ಹೆದ್ರಿಕೆ ಆಯ್ತು. ಊರಲ್ಲಿ ಮಕ್ಕಳು ಮರಿ ಬಿಟ್ಟು ಬಂದೇವಿ. ಹಿಂಗಾಗಿ ದೌಡ್ ಮಾಡಿ ಊರಿಗೆ ಹೊಂಟೇವಿ. ನಮ್ಮ ಮೇಸ್ತ್ರಿಗಳು ಊರಿಗೆ ಹೋಗ್ಬಾರ್ದು ಏನು ಆಗಲ್ಲ ಧೈರ್ಯದಿಂದ ಇರುವಂತೆ ಹೇಳಿದ್ರು. ಆದ್ರೆ, ನಮ್ಗ ಅಂಜೀಕಿ ಆಗೀ ಬಂದ್ಬಿಟ್ವಿ ಎಂದು ಜಾಲಕಮಲದಿನ್ನಿ ಗ್ರಾಮದ ದೇವಮ್ಮ ವಾಲಿಕಾರ, ಮಹಾದೇವಿ ಬಿರಾದಾರ ಆತಂಕ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿದ ಆದಪ್ಪ ಕುರಿ ಮತ್ತು ಸಂತೋಷ ಮಡಿವಾಳ ಅವರು, ‘ನಮ್ಮ ತಂಡದಾಗ ಇನ್ನೂ 40 ಜನ ಅಲ್ಲೇ ಇದ್ದಾರ. ಅವ್ರ ಏನಾದ್ರೂ ನಾವು ಬಿಟ್ಟು ಬರೋಲ್ಲ ಅಂದ್ರು. ಸಾಯಾಕ ಗಟ್ಟಿ ಇದ್ದೋರು ಅಲ್ಲೇ ಉಳುದ್ರು’ ಎಂದು ತಿಳಿಸಿದರು.

ಮಾ.19ರಂದು ಹುಣ್ಣಿಮೆಯ ದಿವಸ ರಾತ್ರಿ ಭೂಮಿಗೆ ಹತ್ತಿರದಲ್ಲಿ ಚಂದ್ರ ಬರಲಿದ್ದು ಅದರಲ್ಲಿ ವಿಶೇಷವೇನಿಲ್ಲ. ಇದಕ್ಕೂ ಸುನಾಮಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಎಷ್ಟೇ ಹೇಳುತ್ತಿದ್ದರೂ ಉರಿಯುವ ತುಪ್ಪಕ್ಕೆ ಬೆಂಕಿ ಸುರಿಯುವಂತೆ ಜ್ಯೋತಿಷಿಗಳು ತಮ್ಮ ತಮ್ಮ ಇಷ್ಟದಂತೆ ಅಂತೆ ಕಂತೆಗಳನ್ನು ಸೃಷ್ಟಿಸಿ ಹರಿಬಿಡುತ್ತಿರುವುದರಿಂದ ನೂರಾರು ಜನರು ಇದ್ದ ಕೂಲಿ ಕೆಲಸ ಬಿಟ್ಟು ಮರಳಿ ಊರಿಗೆ ಬರುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.