ADVERTISEMENT

ಪ್ರವೇಶ, ಅಲ್ಫಾ ಮುಡಿಗೆ ಪ್ರಶಸ್ತಿ

ಕರ್ನಾಟಕ ವಿವಿ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 8:19 IST
Last Updated 4 ಸೆಪ್ಟೆಂಬರ್ 2013, 8:19 IST

ಗದಗ: ನೇಸರನ ಕಿರಣಗಳು ಭೂಮಿಗೆ ಇನ್ನೂ ತಾಕಿರಲಿಲ್ಲ. ಅಲ್ಲಿ ಕ್ರೀಡಾಪಟುಗಳ ದಂಡೇ ನೆರೆದಿತ್ತು. ಹಿಂದಿನ ರಾತ್ರಿ ಸುರಿದ ಮಳೆಯ ಪರಿಣಾಮ ತಣ್ಣನೆ ಗಾಳಿ ಬೀಸುತ್ತಿತ್ತು. ಗುರಿಯತ್ತ ಧಾವಿಸಿದ ಓಟಗಾರರನ್ನು ನೋಡಿ ಪ್ರೇಕ್ಷಕರು ಕೂಡ ಆನಂದಿಸಿದರು.

ನಗರದ ಕೆವಿಎಸ್‌ಆರ್ ಕಾಲೇಜು ಆಶ್ರಯದಲ್ಲಿ ಮಂಗಳವಾರ ನಡೆದ ಕರ್ನಾಟಕ ವಿವಿ ಅಂತರ ಮಹಾವಿದ್ಯಾಲಯಗಳ ಏಕವಲಯ ಪುರುಷ-ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಕ್ರೀಡಾಭಿಮಾನಿಗಳಿಗೆ ರೋಮಾಂಚಕಾರಿ ಅನುಭವ ನೀಡಿತು.

ಕುತೂಹಲ ಕೆರಳಿಸಿದ್ದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಧಾರವಾಡ ಜೆಎಸ್‌ಎಸ್ ಮಹಾವಿದ್ಯಾಲಯದ ಡಿ.ಜಿ.ಪ್ರವೇಶ ಹಾಗೂ ಮಹಿಳಾ ವಿಭಾಗದಲ್ಲಿ ಹುಬ್ಬಳ್ಳಿ ನೆಹರು ಕಾಲೇಜಿನ ಅಲ್ಫಾ ಗೋನಾ ಪ್ರಥಮ ಸ್ಥಾನ ಪಡೆದರು. ಗದುಗಿನ ಕೆಎಲ್‌ಇ ಕಾಲೇಜಿನ ಕೆ.ಎಸ್.ಡೋಣಿ  ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಚುಮು ಚುಮು ಚಳಿಯಲ್ಲಿ ಪುರುಷರ 12 ಕಿ.ಮೀ. ಓಟಕ್ಕೆ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಫ್.ದಂಡಿನ ಚಾಲನೆ  ನೀಡಿದರು. ಕೆವಿಎಸ್‌ಆರ್ ಕಾಲೇಜು ಆವರಣದಿಂದ ಪ್ರಾರಂಭಗೊಂಡ ಓಟದಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳು ಹಾತಲಗೇರಿ ರಸ್ತೆ ಮೂಲಕ ಸಾಗಿ ಅದೇ ಮಾರ್ಗದಲ್ಲಿ ವಾಪಸ್ ಬಂದರು. ನಂತರ ನಡೆದ ಮಹಿಳೆಯರ 6 ಕಿ.ಮೀ. ಓಟಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಕುಂತಲಾ ದಂಡಿನ ಚಾಲನೆ ನೀಡಿದರು. ಮಹಿಳಾ ಕ್ರೀಡಾಪಟುಗಳು ಹಾತಲಗೇರಿ ರಸ್ತೆ ಮಾರ್ಗವಾಗಿ ಸಂಚರಿಸಿ ಮರಳಿ ಅದೇ ರಸ್ತೆಯಲ್ಲಿ ಕಾಲೇಜಿಗೆ ಆಗಮಿಸಿದರು.

ಫಲಿತಾಂಶ
ಪುರುಷರ ವಿಭಾಗ: ಪ್ರವೇಶ ಡಿ.ಜಿ. (ಜೆಎಸ್‌ಎಸ್ ಮಹಾವಿದ್ಯಾಲಯ ಧಾರವಾಡ)-1, ಪರಸಪ್ಪ ಹಳಿಜೋಳ (ಕರ್ನಾಟಕ ಆರ್ಟ್ಸ್ ಕಾಲೇಜು ಧಾರವಾಡ)-2, ಕೆ.ಎಸ್.ಡೋಣಿ (ಕೆಎಲ್‌ಇ ಕಲಾ-ವಾಣಿಜ್ಯ ಕಾಲೇಜು ಗದಗ)-3, ಲಿಂಗರಾಜ ಹಳಿಯಾಳ (ಕರ್ನಾಟಕ ಆರ್ಟ್ಸ್ ಕಾಲೇಜು ಧಾರವಾಡ)-4, ತಿರುಪತಿ ಧಾನವಾಡೆ (ಎಸ್‌ಕೆವಿಪಿಎಸ್ ಕಾಲೇಜು ಹೊಳೆ ಆಲೂರ)-5, ಜಿ.ಬಿ.ತಂಬೂರ (ಜೆಎಸ್‌ಎಸ್‌ಬಿ ಕಾಲೇಜ್ ಧಾರವಾಡ)-6, ಆರ್.ಎನ್.ಬಂಡಿವಡ್ಡರ (ಜೆಎಸ್‌ಎಸ್‌ಬಿ ಕಾಲೇಜ್ ಧಾರವಾಡ)-7, ಸುನಿಲ್ ಕಟ್ಟಿಮನಿ (ಕರ್ನಾಟಕ ಆರ್ಟ್ಸ್ ಕಾಲೇಜು ಧಾರವಾಡ)-8, ಸುಭಾಸ ಅಳವಂಡಿ (ಪಿಜಿ ಜಿಮ್ಖಾನಾ ಕೆಯುಡಿ)-9.

ಮಹಿಳೆಯರ ವಿಭಾಗ: ಅಲ್ಫಾ ಗೋನಾ (ನೆಹರು ಕಾಲೇಜು ಹುಬ್ಬಳ್ಳಿ)-1, ಪೂಜಾ ಸಾವಂತ (ಜೆಎಸ್‌ಎಸ್‌ಎಸ್‌ಎಂಐ ಧಾರವಾಡ)-2), ಎ.ಎಸ್.ನಾಯ್ಕ (ಜೆಎಸ್‌ಎಸ್‌ಎಸ್‌ಎಂಐ ಧಾರವಾಡ)-3, ಗಂಗಾಬಾಯಿ ಮೇಗಾನಿ ( ಸರ್ಕಾರಿ  ಪ್ರಥಮ  ದರ್ಜೆ ಕಾಲೇಜು ಹಳಿಯಾಳ)-4. ಸುರೇಖಾ ಪಾಟೀಲ (ಕೆ.ಜಿ.ನಾಡಗೇರ ಕಾಲೇಜು ಧಾರವಾಡ)-5 ಎಚ್.ಐ.ಹುಡೇದ (ಕೆಎಸ್‌ಎಸ್ ಕಾಲೇಜ್ ಗದಗ)-6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.