ADVERTISEMENT

ಬತ್ತಿದ ಕೆರೆ: ಮೀನುಗಾರರ ಕುಟುಂಬ ಸಂಕಷ್ಟದಲ್ಲಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 10:34 IST
Last Updated 14 ಡಿಸೆಂಬರ್ 2012, 10:34 IST
ಗದಗ ಜಿಲ್ಲೆಯ ಡಂಬಳದ ಐತಿಹಾಸಿಕ ಕೆರೆ ನೀರಿಲ್ಲದ ಬತ್ತಿ ಹೋಗಿದೆ.
ಗದಗ ಜಿಲ್ಲೆಯ ಡಂಬಳದ ಐತಿಹಾಸಿಕ ಕೆರೆ ನೀರಿಲ್ಲದ ಬತ್ತಿ ಹೋಗಿದೆ.   

ಗದಗ: ಸತತ ಎರಡು ವರ್ಷದ ಬರದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಕೆರೆಗಳು ಸಂಪೂರ್ಣ ಬತ್ತಿ ಹೋಗಿ ಮೀನುಗಾರಿಕೆಗೆ ಕುತ್ತು ಬಂದಿದೆ.

ಕೃಷಿ ಕ್ಷೇತ್ರದ ಸಮೃದ್ಧಿಯ ಜತೆಗೆ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ದಶಕಗಳ ಹಿಂದೆ ನಿರ್ಮಾಣವಾದ ಬೃಹತ್ ಕೆರೆಗಳು ಈಗ ನೀರಿಲ್ಲದೆ ಬರಿದಾಗಿವೆ. 2011ಮತ್ತು 2012ನೇ ಸಾಲಿನ ಬರದಿಂದಾಗಿ ಕೆರೆಗಳಲ್ಲಿ ನೀರಿಲ್ಲದೆ ಕೇವಲ ಕೃಷಿಯಲ್ಲದೆ ಮೀನುಗಾರಿಕೆ ಅವಲಂಬಿಸಿದ್ದ ಕುಟುಂಬಗಳು ಸಂಕಷ್ಟದಲ್ಲಿದೆ.

ಜಿಲ್ಲೆಯ ಕೆರೆಗಳಲ್ಲಿ ಬೃಹತ್ ಪ್ರಮಾಣದ ಮೀನುಗಾರಿಕೆ ನಡೆಯುತ್ತಿತ್ತು. ಇಲ್ಲಿ ಉತ್ಪಾದನೆಯಾಗುವ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಅದರಲ್ಲೂ ಮುಂಡರಗಿಯ ತುಂಗಭದ್ರ ಹಿನ್ನಿರಿನ ಮೀನಿಗೆ ಬೇಡಿಕೆ ಹೆಚ್ಚು. ಸದ್ಯ ಗುತ್ತಿಗೆ ನೀಡಿರುವ 8 ಕೆರೆಗಳ ಪೈಕಿ ನಾಲ್ಕರಲ್ಲಿ ಸ್ವಲ್ಪ ಪ್ರಮಾಣದ ನೀರಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಅವುಗಳು ಬತ್ತಿ ಹೋಗಲಿವೆ.

ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವುದಿಲ್ಲ. ಕೆರೆಯಲ್ಲಿ ಅಲ್ಪಸ್ವಲ್ಪ ಉಳಿ ಯುವ ನೀರಿನಲ್ಲಿ ಮೀನು ಹಿಡಿದು ಉಪ ಜೀವನ ಸಾಗಿಸುವ ಕುಟುಂಬಗಳು ಬೀದಿಗೆ ಬೀಳಲಿವೆ.

ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಜಿಲ್ಲೆಯ ಒಟ್ಟು 23 ಕೆರೆಗಳು (ಗದಗ-3, ರೋಣ-5, ಶಿರಹಟ್ಟಿ-6, ಮುಂಡರಗಿ-9) ಒಳಪಡಲಿವೆ.  2011-12ನೇ ಸಾಲಿನಲ್ಲಿ 15 ಕೆರೆಗಳ ಹರಾಜಿನಿಂದ ಇಲಾಖೆಗೆ ರೂ. 1.10 ಲಕ್ಷ ಆದಾಯ ಬಂದಿತ್ತು. 15 ಲಕ್ಷದಲ್ಲಿ  8 ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಡಲಾಗಿತ್ತು. 2012-13ನೇ ಸಾಲಿನಲ್ಲಿ ಕೇವಲ 8 ಕೆರೆಗಳನ್ನು ರೂ. 65 ಸಾವಿರಕ್ಕೆ ಗುತ್ತಿಗೆ ನೀಡಲಾಗಿದೆ. ನಾಲ್ಕು ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಡಲಾಗಿದೆ.+

ಕಳೆದ ವರ್ಷ 600 ಮೆಟ್ರಿಕ್ ಟನ್ ಇದ್ದ ಮೀನು ಉತ್ಪಾದನೆ, ಪ್ರಸಕ್ತ ವರ್ಷ 200 ಮೆಟ್ರಿಕ್ ಟನ್‌ಗೆ ಕುಸಿದಿದೆ. ನೀರಿನ ಅಭಾವದಿಂದ ಶೇ. 60ರಷ್ಟು ಮೀನು ಉತ್ಪಾದನೆ ಕಡಿಮೆಯಾಗಿದೆ. ಒಟ್ಟಿನಲ್ಲಿ ಬರದಿಂದಾಗಿ    ಮೀನುಗಾರಿಕೆಗೆ ಬರೆ ಎಳೆದಂತಾಗಿದೆ. ಇನ್ನೂ        ಗ್ರಾಮ ಪಂಚಾಯಿತಿ ವ್ಯಾಪ್ತಿಯ 230 ಕೆರೆಗಳಲ್ಲಿ              ಶೇ. 70ರಷ್ಟು ಕೆರೆಗಳು ವಿಲೇವಾರಿಯಾಗದೆ ಆದಾಯಕ್ಕೂ ಹೊಡೆತ ಬಿದ್ದಿದೆ.

ಮೀನುಗಾರರಿಗೆ ಸೌಲಭ್ಯ: ಮೀನು ಸಾಕಾಣಿಕೆಗೆ ಮತ್ತು ಉತ್ಪಾದನೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಸೈಕಲ್, ತ್ರಿ ಚಕ್ರವಾಹನ, ಐಸ್ ಬಾಕ್ಸ್, ದ್ವಿಚಕ್ರವಾಹನ, ನಾಲ್ಕು ಚಕ್ರದ ಮಿನಿ ಗೂಡ್ಸ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿದೆ. ಎಲ್ಲ ಮೀನುಗಾರರಿಗೆ ಐದು ಸಾವಿರ ರೂಪಾಯಿ ವೆಚ್ಚದ ಮೀನು ಸಲಕರಣೆ ಕಿಟ್‌ಗಳನ್ನು ಉಚಿತವಾಗಿ ನೀಡುತ್ತಿದೆ.  ಎಸ್‌ಸಿ, ಎಸ್‌ಟಿಗೆ ಉಚಿತ ಬಲೆ ಮತ್ತು ಹರಿಗೋಲು. ಕೆರೆ ಗುತ್ತಿಗೆ ಪಡೆದವರು ಸರ್ಕಾರಿ ಸ್ವಾಮ್ಯದ ನರ್ಸರಿಯಿಂದ ಮೀನಿನ ಮರಿ      ಖರೀದಿಸಿದರೆ ಶೇ. 50ರಷ್ಟು ಸಹಾಯಧನ ದೊರೆಯಲಿದೆ.

ಕಾಲುವೆ ಪಕ್ಕದ ಜಮೀನಿನಲ್ಲಿ ನೀರು ನಿಂತು ಜವಳು ಆಗಿರುತ್ತದೆ.          ಜವಳು ಪ್ರದೇಶದಲ್ಲಿ ಹೆಚ್ಚಿನ ಉಪ್ಪಿನ ಅಂಶ ಇರುವ ಕಾರಣ ಯಾವ ಬೆಳೆಯನ್ನು ಬೆಳೆಯಲು ಆಗುವುದಿಲ್ಲ. ಅಂತಹ ಜಮೀನಿನಲ್ಲಿ ಕೇಂದ್ರ ಸರ್ಕಾರದ        ಎನ್‌ಎಂಪಿಎಸ್ ಯೋಜನೆಯಲ್ಲಿ         ಮೀನು  ಕೃಷಿ ಹೊಂಡ ಮಾಡಿಕೊಳ್ಳಲು   ಅವಕಾಶ ಕಲ್ಪಿಸಲಾಗಿದೆ. 1 ಹೆಕ್ಟೇರೆಗೆ ರೂ. 1.60 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ಎಸ್,ಎಸ್‌ಟಿಗೆ    ರೂ. 2 ಲಕ್ಷ ಸಬ್ಸಿಡಿ ದೊರೆಯಲಿದೆ.+

ಕೆರೆಗೆ ನೀರು ತುಂಬಿಸಲಿ
ಕೆರೆಯಲ್ಲಿನ ಹೂಳು ತೆಗೆದು ನೀರು ತುಂಬಿಸುವ ಯೋಜನೆ ಜಾರಿಯಾದರೆ ಇಲಾಖೆಗೂ ಆದಾಯ ಮತ್ತು ಮೀನುಗಾರಿಕೆ ನೆಚ್ಚಿಕೊಂಡಿರುವ ಕುಟುಂಬಗಳು ಬದುಕುತ್ತವೆ. ಬಹುತೇಕ ಕೆರೆಗಳು ಬತ್ತಿಹೋಗಿ ಮೀನು ಉತ್ಪಾದನೆಯೂ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಎಷ್ಟು ಕುಟುಂಬಗಳು ಮೀನುಗಾರಿಕೆ ಅವಲಂಬಿಸಿವೆ ಎಂಬುದರ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಮಳೆ ಬಂದರೆ ಮೀನುಗಾರರು ಮತ್ತು ರೈತರು ಬದುಕುತ್ತಾರೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT