ADVERTISEMENT

ಬಯಲು ಸೀಮೆಯಲ್ಲಿ ಮಾವಿನ ಘಮಲು

ಆದಾಯ ಮೂಲ ನಿಶ್ಚಿತಪಡಿಸಿಕೊಂಡ ರೈತ ಬಸವರಾಜ

​ಪ್ರಜಾವಾಣಿ ವಾರ್ತೆ
Published 28 ಮೇ 2018, 10:53 IST
Last Updated 28 ಮೇ 2018, 10:53 IST
ಬಸವರಾಜ ಮೂಲಿಮನಿ ಅವರ ತೋಟದಲ್ಲಿನ ಮಾವಿನ ಗಿಡ ಕಾಯಿ ಬಿಟ್ಟು ಕಂಗೊಳಿಸುತ್ತಿದೆ
ಬಸವರಾಜ ಮೂಲಿಮನಿ ಅವರ ತೋಟದಲ್ಲಿನ ಮಾವಿನ ಗಿಡ ಕಾಯಿ ಬಿಟ್ಟು ಕಂಗೊಳಿಸುತ್ತಿದೆ   

ಲಕ್ಷ್ಮೇಶ್ವರ: ಹೆಚ್ಚು ಮಳೆ ಸುರಿಯುವ ಮಲೆನಾಡ ಪ್ರದೇಶದಲ್ಲಿ ಮಾವಿನ ಮರಗಳು ಚೆನ್ನಾಗಿ ಬೆಳೆದು ಫಲ ಕೊಡುತ್ತವೆ. ಆದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರಯತ್ನದಿಂದ ಈಚಿನ ದಿನಗಳಲ್ಲಿ ಬಯಲು ಸೀಮೆಯಲ್ಲೂ ಮಾವಿನ ಕೃಷಿ ಭರದಿಂದ ಸಾಗಿದೆ. ಮಾವು ಬೆಳೆದ ರೈತರು ಕೈ ತುಂಬ ಆದಾಯ ಗಳಿಸುತ್ತಿದ್ದಾರೆ. ಲಕ್ಷ್ಮೇಶ್ವರ ತಾಲ್ಲೂಕು ಸೂರಣಗಿ ಗ್ರಾಮದ ಬಸವರಾಜ ಮೂಲಿಮನಿ ಇದಕ್ಕೆ ಉದಾಹರಣೆ ಆಗಿದ್ದು ಈ ಭಾಗದ ಇತರ ರೈತರಿಗೆ ಮಾದರಿ ಆಗಿದ್ದಾರೆ.

ರೈತ ಬಸವರಾಜ ಅವರು ತಮ್ಮ 2 ಎಕರೆಯಲ್ಲಿ ಆಪೂಸಾ (ಆಲ್ಫಾನ್ಸೊ) ತಳಿಯ ಮಾವಿನ ಗಿಡಗಳನ್ನು ಬೆಳೆದಿದ್ದಾರೆ. ತೋಟಗಾರಿಕೆ ಇಲಾಖೆಯವರು ಉಚಿತವಾಗಿ 400 ಸಸಿಗಳನ್ನು ಇವರಿಗೆ ಪೂರೈಸಿದ್ದು, ಅವುಗಳಲ್ಲಿ ಸಧ್ಯ 390 ಸಸಿಗಳು ಗಿಡಗಳಾಗಿ ಬೆಳೆದು ಫಲ ನೀಡುತ್ತಿವೆ. ಇವರ ತೋಟದ ಹಣ್ಣುಗಳು ಅತ್ಯಂತ ಸಿಹಿಯಾಗಿದ್ದು ದಾವಣಗೆರೆ ಮೂಲದ ವ್ಯಾಪಾರಿ ತೋಟದ ಫಸಲನ್ನು ಖರೀದಿಸಲು ರೈತ ಮೂಲಿಮನಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ವರ್ಷಕ್ಕೆ ₹ 25 ಸಾವಿರದಂತೆ ಐದು ವರ್ಷಗಳವರೆಗೆ ₹ 2.50 ಲಕ್ಷ ಅನ್ನು ಈಗಾಗಲೇ ನೀಡಲು ಅವರು ಒಪ್ಪಿಕೊಂಡಿದ್ದು ₹ 50 ಸಾವಿರ ಮುಂಗಡ ಕೊಟ್ಟಿದ್ದಾರೆ.

ತೋಟ ಕಾಯುವ ಕೂಲಿ ಸೇರಿ ಇತರ ಎಲ್ಲ ಖರ್ಚು–ವೆಚ್ಚಗಳನ್ನು ವ್ಯಾಪಾರಿಯೇ ನೋಡಿಕೊಳ್ಳುತ್ತಾರೆ. ಹೀಗಾಗಿ, ಬಸವರಾಜ ಅವರಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಅಲ್ಲದೆ ವರ್ಷಪೂರ್ತಿ ತೋಟಕ್ಕೆ ಖರ್ಚು ಮಾಡುವ ಚಿಂತೆಯಿಲ್ಲ. ಅಲ್ಲದೆ, ಇವರೇ ತೋಟವನ್ನು ಕಾಯುವುದರಿಂದ ವರ್ಷಕ್ಕೆ ₹ 35 ಸಾವಿರ ಕೂಲಿ ಹಣವೂ ಇವರಿಗೆ ಬರುತ್ತದೆ.

ADVERTISEMENT

ಇದೇ ತೋಟದಲ್ಲಿ ಧರ್ಮಸ್ಥಳ ಸಂಘದವರು ಉಚಿತವಾಗಿ ಕೊಡ ಮಾಡಿದ 400 ಪೇರಲ ಹಾಗೂ 50 ಲಿಂಬು ಸಸಿಗಳನ್ನು ನಾಟಿ ಮಾಡಿದ್ದು ಅವು ಕೂಡ ಸಹ ಸೊಗಸಾಗಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳಿಂದಲೂ ನಿಶ್ಚಿತ ಆದಾಯ ಬರುವುದು ಕಟ್ಟಿಟ್ಟ ಬುತ್ತಿ ಎಂಬ ವಿಶ್ವಾಸ ಬಸವರಾಜ ಅವರದ್ದಾಗಿದೆ.

‘ಆರಂಭದಲ್ಲಿ ₹ 30 ಸಾವಿರ ಖರ್ಚು ಮಾಡಿದ್ದು ಬಿಟ್ರ ಮತ್ತ ಯಾವ ಖರ್ಚು ಮಾಡದ ಮಾವಿನ ಗಿಡ ಬೆಳದೇವ್ರೀ. ಇನ್ನೊಂದು ಸ್ವಲ್ಪ ದಿನ ಬಿಟ್ರ ಪ್ಯಾರಲ ಗಿಡ ದೊಡ್ಡವು ಆಕ್ಕಾವ್ರೀ’ ಎಂದು ಇವರು ಖುಷಿಯಿಂದ ಹೇಳುತ್ತಾರೆ.

‘ನಾವು ಮಾವಿನ ತ್ವಾಟ ಮಾಡಾಕ ಇಲಾಖೆ ಅಧಿಕಾರಿ ಸುರೇಶ ಕುಂಬಾರ ಅವರ ಕಾರಣ. ಅವರು ಚಲೋ ಹಣ್ಣಿನ ಸಸಿಗಳನ್ನು ಕೊಡಸ್ಯಾರ್ರೀ’ ಎಂದು ರೈತ ಬಸವರಾಜ ಅವರ ಮಗನಾದ ಮಂಜುನಾಥ ನೆನೆಯುತ್ತಾರೆ.

‘ಅಧಿಕಾರಿಗಳು ಹೇಳಿದಂತೆ ಕೃಷಿ ಮಾಡಿದರೆ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲ್ಲೂಕಿನಾದ್ಯಂತ ಉತ್ತಮ ರೀತಿಯಲ್ಲಿ ಮಾವು ಬೆಳೆಯಲು ಸಾಧ್ಯ’ ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಸುರೇಶ ಕುಂಬಾರ ಹೇಳುತ್ತಾರೆ.

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.