ADVERTISEMENT

ಬರಗಾಲದಲ್ಲೂ ಕುಗ್ಗದ ಹಬ್ಬದ ಖುಷಿ...!

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 5:45 IST
Last Updated 14 ನವೆಂಬರ್ 2012, 5:45 IST

ಲಕ್ಷ್ಮೇಶ್ವರ: ಪ್ರಸ್ತುತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದ ರಿಂದ ತಾಲ್ಲೂಕಿನ ತುಂಬ ಬರಗಾಲದ ಪರಿಸ್ಥಿತಿ ಉಂಟಾಗಿ ಪ್ರತಿ ಹಬ್ಬವನ್ನೂ ಜನತೆ ನಿರಾಶೆಯಿಂದಲೇ ಆಚರಿಸು ವಂತಾಗಿತ್ತು. 

  ಆದರೆ ಅಕ್ಟೋಬರ್ ಕೊನೆ ವಾರ ಹಾಗೂ ನವೆಂಬರ್ ಮೊದಲ ವಾರದಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ದೀಪಾ ವಳಿಗೆ ಮರುಜೀವ ಬಂದಿದ್ದು ಜನ ಸ್ವಲ್ಪ ನೆಮ್ಮದಿಯಿಂದ ಬೆಳಕಿನ ಹಬ್ಬ ಆಚರಿಸುವಂತಾಗಿದೆ.

ಮಳೆ ಇಲ್ಲದೆ ಹಬ್ಬ ಆಚರಿಸುವುದು ಹೇಗೆ ಎಂಬ ಚಿಂತೆ ರೈತರು, ರೈತ ಕಾರ್ಮಿಕರು, ಮಧ್ಯಮ ವರ್ಗದ ಜನತೆ ಯನ್ನು ಚಿಂತೆಯಲ್ಲಿ ಮುಳುಗಿಸಿತ್ತು. ಆದರೆ ನವೆಂಬರ್‌ನಲ್ಲಿ ಬಂದ ಮಳೆ ಅವರಲ್ಲಿ ಹೊಸ ಹುರುಪು ತುಂಬಿದ್ದು ಕಳೆದ ಮೂರು ದಿನಗಳಿಂದ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಲಕ್ಷ್ಮೇಶ್ವರದ ಪೇಟೆಗೆ ಲಗ್ಗೆ ಇಟ್ಟಿದ್ದರು.

ಹೂವು, ಹಣ್ಣು, ಕಬ್ಬು, ಬಾಳೆ ದಿಂಡು, ತೆಂಗಿನಗರಿ, ಮಾವಿನ ಎಲೆ, ಕಿರಾಣಿ ಹಾಗೂ ಪಟಾಕಿ ಖರೀದಿಸುವಲ್ಲಿ ಜನತೆ ತಲ್ಲೆನರಾಗಿದ್ದರು. ಮಂಗಳವಾರ ಒಂದು ಕೆಜಿ ಸೇವಂತಿಗೆ ಹೂವಿನ ಬೆಲೆ ಬರೋಬ್ಬರಿ 100-150 ಇದ್ದರೆ ಐದು ತರದ ಹಣ್ಣುಗಳ ಸೆಟ್‌ಗೆ 100-140 ರೂಪಾಯಿ ಇತ್ತು. ಅಲ್ಲದೆ ಐದು ಕಬ್ಬುಗಳ ಕಟ್ಟು 100 ರೂಪಾಯಿಗೆ ಮಾರಾಟವಾಗಿ ಹಿಂದಿನ ದಾಖಲೆ ಮುರಿದರೆ ಡಜನ್ ಬಾಳೆಹಣ್ಣಿನ ದರ 30 ರೂಪಾಯಿ ಇತ್ತು. ಅದರಂತೆ ಜೋಡಿ ಬಾಳೆದಿಂಡುಗಳು ಆಕಾರಕ್ಕೆ ತಕ್ಕಂತೆ ಉತ್ತಮ ಬೆಲೆಗೆ ಮಾರಾಟ ವಾದವು.

ಹಾಗೆಯೇ ಆಕಾಶಬುಟ್ಟಿ ಮತ್ತು ಹೊಸ ಬಟ್ಟೆ ಕೊಳ್ಳುವಲ್ಲಿ ಜನರ ಉತ್ಸಾಹ ಇಮ್ಮಡಿಯಾಗಿದ್ದು ಕಂಡು ಬಂದಿತು.  ಈ ವರ್ಷದ ಮ ೆಗಾಲದ ಕೊನೆ ಮಳೆ ಸುರಿದು ಜನತೆ ಸಂತಸ ತಂದಿದ್ದು ಬೆಳಕಿನ ಹಬ್ಬಕ್ಕೆ ವಿಶೇಷ ಮೆರಗು ತಂದು ನೀಡಿದ್ದು ಮಾತ್ರ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.