ADVERTISEMENT

ಬರದ ನಡುವೆಯೂ ಸಂಭ್ರಮದ ಚರಗ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:53 IST
Last Updated 2 ಜನವರಿ 2014, 6:53 IST

ಗದಗ: ‘ಬೆಳಿಗ್ಗೆ ಬೆಳ್ಳಿ ಬೆಳ್ಳಿ ಚುಕ್ಕಿಯಾ ಬೆಳಗಾಯಿತು ಏಳ,   ಬಸವಣ್ಣ  ಹೂಡಿಕೊಂಡು ಹೊಲಕ್ಕೆ ಹೋಗೂಣಾ ಬುತ್ತಿಯ ನೀ ಮಾಡು’
ದೇಶದ ವಿವಿಧ ಭಾಗಗಳಲ್ಲಿ  ಹಬ್ಬಗಳನ್ನು ಅಲ್ಲಿನ ಸಂಪ್ರದಾಯ, ಸಂಸ್ಕೃತಿಗೆ ತಕ್ಕಂತೆ ಆಚರಿಸಲಾಗುತ್ತದೆ.  ‘ಕೈ ಕೆಸರಾದರೆ ಬಾಯಿ ಮೊಸರು’ ಎನ್ನುವ ಕಾಯಕದೊಂದಿಗೆ ದೇಶಕ್ಕೆ ಅನ್ನ ನೀಡುತ್ತಿರುವ ರೈತ  ತನ್ನ ಕುಟುಂಬ ಹಾಗೂ ಬಂಧು–ಬಳಗದೊಂದಿಗೆ ಆಚರಿಸುವ ವಿಶಿಷ್ಟ ಹಬ್ಬವೇ ‘ಚರಗ‘ ಎಳ್ಳು ಹೋಳಿಗೆ, ಶೆಂಗಾ ಹೋಳಿಗೆ, ಕರಿಗೆಡುಬು, ತುಪ್ಪ, ಕುಚಗಡುಬು, ರೊಟ್ಟಿ, ಚಪಾತಿ, ಶೇಂಗಾ ಚಟ್ನಿಪುಡಿ, ಎಳ್ಳು ಚಟ್ನಿಪುಡಿ, ಎಣ್ಣಿ ಬದನೆಕಾಯಿ, ಸಂಡಿಗೆ, ಕರಿದ ಮೆಣಸಿನಕಾಯಿ, ಕೆಂಪುಖಾರಾ,  ಕುಚ್ಚಮೆಣಸಿನಕಾಯಿ ಪಲ್ಲೆ, ಪುಂಡಿ ಪಲ್ಲೆ, ಅಗಸಿ ಚೆಟ್ನಿ, ಮೊಸರು, ಕಡ್ಲಿಪುಡಿ,  ಹುಣಸಿ ಚಟ್ನಿ, ಬಜಿ,  ಕಟ್ಟಿನ ಸಾರು, ಅನ್ನ, ಮೊಸರು..  ಅಬ್ಬಬ್ಬಾ ಒಂದೆ ಈ ಎಲ್ಲ ತಿನಿಸುಗಳನ್ನು ಎಳ್ಳು ಅಮಾವಾಸ್ಯೆ ದಿನದಂದು ತಯಾರಿಸಿ ಸವಿಯುವುದು ಸಂಪ್ರದಾಯ.

ಈ ಬಾರಿ ಹೊಸ ವರ್ಷ ಮತ್ತು ಎಳ್ಳು ಅಮಾವಾಸ್ಯೆ ಒಂದೇ ದಿನ ಅಂದರೆ ಬುಧವಾರ ರೈತರು ಆಚರಿಸಿದರು. ಭೂತಾಯಿ ನಂಬಿ ಅನ್ನದಾತ ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಬೀಜ ಉತ್ತಿ, ಬಿತ್ತಿ ಉಳುಮೆ ಮಾಡಿ ಜಗತ್ತಿಗೆ ಅನ್ನ ಹಾಕುತ್ತಾನೆ. ಇದರ ಸಡಗರ ಹಂಚಿಕೊಳ್ಳಲು ರೈತನು ಎಳ್ಳು ಅಮಾವಾಸ್ಯೆ ದಿನದಂದು ಬಂಧು, ಮಿತ್ರರೊಂದಿಗೆ ಸಿಹಿ ಅಡುಗೆಯೊಂದಿಗೆ ಸಿಹಿ ಊಟ ಮಾಡಿ ಚರಗ ಆಚರಿಸುತ್ತಾನೆ.

ಉತ್ತರ ಕರ್ನಾಟಕದ ರೈತರು ಚರಗ ಆಚರಿಸಿಕೊಳ್ಳಲು ಮನೆಯಲ್ಲಿ ಒಂದೆರೆಡು ದಿನಗಳ ಮುಂಚೆಯೇ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅಂದು ಬೆಳಿಗ್ಗೆ ಎತ್ತುಗಳಿಗೆ ಸ್ನಾನ ಮಾಡಿಸಿ, ಶೃಂಗರಿಸುತ್ತಾರೆ.  ನಂತರ ಚಕ್ಕಡಿ (ಬಂಡಿ)ಯನ್ನು ತೆಗೆದುಕೊಂಡು  ಮನೆ ಮಂದಿ ಮತ್ತು ನೆರೆ­ಹೊರೆಯವ­ರೊಂದಿಗೆ ಕೂಡಿಕೊಂಡು ಹೊಲಕ್ಕೆ ತೆರಳುತ್ತಾರೆ.

ಹೊಲದಲ್ಲಿ ಪಾಂಡವರನ್ನು ಸ್ಥಾಪಿಸಿ ಪೂಜೆ ಸಲ್ಲಿಸಿ ಗಿಡದ ಸುತ್ತಲೂ ‘ಹುಲ್ಲಿಲಿಗೂ ಸುರಾಂಬಳಿಗೂ’ ಎನ್ನುತ್ತಾ ನೈವೆದ್ಯವನ್ನು ಗಿಡದ ಸುತ್ತಲ್ಲೂ ಎಸೆಯುತ್ತಾರೆ. ಇದರ ಅರ್ಥ ರೈತನು ತನ್ನ ಈ ಕಾಯಕದಲ್ಲಿ ತನ್ನೊಂದಿಗೆ ಶ್ರಮಿಸಿದ ಪಕ್ಷಿ-ಕೀಟಗಳಿಗೂ ಸಮಪಾಲು ನೀಡಿ ಸಂತೃಪ್ತಿ ಕಾಣುತ್ತಾನೆ.

ಗದಗ ಜಿಲ್ಲೆಯಾದ್ಯಂತ ಮಳೆ ಕಾಣದೆ ರೈತ ಕಂಗಾಲಾಗಿದ್ದರೂ ಹಿರಿಯರಿಂದ ಬಳುವಳಿಯಾಗಿ ಬಂದ  ಸಂಪ್ರದಾಯ, ಸಂಸ್ಕಾರ  ಮರೆಯದೆ  ಮುಂದು ವರೆಸಿಕೊಂಡು ಬರುತ್ತಿದ್ದಾನೆ. ಅದೇ ರೀತಿ ಈ ವರ್ಷದಲ್ಲಿ ಚರಗ ಹಾಗೂ ಹೊಸ ವರ್ಷದ ಸಂಭ್ರಮವನ್ನು ಏಕಕಾಲದಲ್ಲಿ ಆಚರಿಸುತ್ತಿರುವುದು ಸಂತಸದ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT