ADVERTISEMENT

ಬರ‌್ರನೆ ಬಂದರು: ಪುರ‌್ರನೆ ಹೋದರು...!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 8:05 IST
Last Updated 19 ಏಪ್ರಿಲ್ 2012, 8:05 IST

ಗದಗ:  ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಬುಧವಾರ ಆಗಮಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಹೊಸದಾಗಿ ನಿರ್ಮಾಣಗೊಂಡಿರುವ ಕೆರೆ, ಗೋಶಾಲೆಗೆ ತಮ್ಮ ಅಧ್ಯಯನವನ್ನು ಸೀಮಿತಗೊಳಿಸಿ, ಬರ ನಿರ್ವಹಣೆಗೆ ಸಭೆಯಲ್ಲಿ ಅಧಿಕಾರಿಗಳು ಕೊಟ್ಟ ಮಾಹಿತಿಗೆ ಜೋತು ಬಿದ್ದರು.

ಬೆಳಿಗ್ಗೆ  ಹೆಲಿಕಾಪ್ಟರ್ ಮೂಲಕ ಹೊಳೆ-ಆಲೂರಿಗೆ  ಆಗಮಿಸಿದ ಸಿಎಂ ಅಲ್ಲಿಂದ ಸುಮಾರು ಮೂರ‌್ನಾಲ್ಕು ಕಿಲೋ ಮೀಟರ್ ದೂರದಲ್ಲಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲೊಂದು ಹತ್ತು ನಿಮಿಷವಿದ್ದು, ಮತ್ತೆ ವಾಪಸ್ ಹೊಳೆ-ಆಲೂರಿಗೆ ಬಂದು ಉಪಹಾರ ಸೇವಿಸಿದರು.
ಬಳಿಕ ರೋಣದ ಕಡೆಗೆ ಧಾವಿಸಿದರು.

ರೋಣ ಹಾಗೂ ಗಜೇಂದ್ರಗಡದ ಮಧ್ಯ ಇಟಗಿ ಗ್ರಾಮದ ಬಳಿ ನಿರ್ಮಿಸಿರುವ ಕೆರೆಯನ್ನು ವೀಕ್ಷಿಸಿ, ನಾಗೇಂದ್ರಗಡದ ಗೋಶಾಲೆಯತ್ತ ಪ್ರಯಾಣ ಬೆಳೆಸಿದರು ಮುಖ್ಯಮಂತ್ರಿ.

ಗೋಶಾಲೆಯಲ್ಲಿ ಜಾನುವಾರುಗಳನ್ನು ನೋಡಿದರು. ಅಲ್ಲಿದ್ದ ಕೆಲವು ರೈತರಿಗೆ ಮೇವಿನ ಬೀಜದ ಪೊಟ್ಟಣವನ್ನು ವಿತರಿಸಿದರು. ಅಲ್ಲಿಂದ ಗಜೇಂದ್ರಗಡಕ್ಕೆ ಹೋದ ಮುಖ್ಯಮಂತ್ರಿ, ಕುಷ್ಟಗಿ ರಸ್ತೆಯ ಸಮೀಪ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣ ಮಾಡಿರುವ ಕೆರೆ ನೋಡಿದರು. ಬಳಿಕ ಸೀದಾ ಗದುಗಿಗೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದರು.

ಸುಮಾರು ಅರ್ಧ ದಿನದ ಪ್ರವಾಸದ ಸಮಯದಲ್ಲಿ ಮುಖ್ಯಮಂತ್ರಿ ಸದಾನಂದಗೌಡರು ಒಬ್ಬ ರೈತನ ಸಮಸ್ಯೆಯನ್ನು ಆಲಿಸಲಿಲ್ಲ. ತಾವು ಹೋಗುತ್ತಿದ್ದ ದಾರಿಯಲ್ಲಿ ಸಿಗುತ್ತಿದ್ದ ಗ್ರಾಮಗಳಲ್ಲಿ ತಮ್ಮನ್ನು ನೋಡಲು ನಿಂತಿದ್ದ ಜನರತ್ತ ಕಾರಿನ ಒಳಗಿನಿಂದಲೇ ಕೈ ಬೀಸಿದರೇ ಹೊರತು, ಸ್ವಲ್ಪ ಹೊತ್ತು ನಿಂತು ಅವರನ್ನು ಮಾತನಾಡಿಸುವ ಗೋಜಿಗೂ ಹೋಗಲಿಲ್ಲ.

ಮುಖ್ಯಮಂತ್ರಿ ವೀಕ್ಷಣೆ ಮಾಡಿದ ಕೆರೆಗಳ ಬಳಿಯೂ ಬೆರಳೆಣಿಕೆಯಷ್ಟು ಜನರಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಧಿಕಾರಿಗಳ ದಂಡು ನೆರೆದಿತ್ತು. ಸುಮಾರು ಒಂದು ಕಿಲೋ ಮೀಟರ್‌ಗೂ ಹೆಚ್ಚು ಉದ್ದನೇಯ ವಾಹನಗಳ ಸಾಲು `ದೊರೆ~ಯನ್ನು ಹಿಂಬಾಲಿಸಿಕೊಂಡು ಹೋಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.