ADVERTISEMENT

ಬಾಲ್ಯ ವಿವಾಹ: ಮನ ಪರಿವರ್ತನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಗದಗ: ಕಠಿಣ ಕಾನೂನು ಮತ್ತು ಜನರ ಮನ ಪರಿವರ್ತನೆಯಿಂದ ಬಾಲ್ಯವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಬಾಲ್ಯ ವಿವಾಹದ ವಿರುದ್ಧ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಏರ್ಪಡಿಸಿದ್ದ ಬೃಹತ್ ಪ್ರಚಾರ ಆಂದೋಲನದ ಸಮಾರೋಪ ಹಾಗೂ 2012ನೇ ಸಾಲಿನ ಹೆಣ್ಣು ಮಗುವಿನ ದಿನಾಚರಣೆ, ತೊಟ್ಟಿಲ ಮಗು  ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಬಾಲ್ಯವಿವಾಹದ ಪ್ರಮಾಣವು ಶೇ 22ರಷ್ಟು ಹೆಚ್ಚಿದೆ. ಹೀಗಾಗಿ ಕಾನೂನಿನ ಜೊತೆಗೆ ಜನರ ಮನವೊಲಿಸುವ ಕಾರ್ಯವನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸರ್ಕಾರದಿಂದ `ತೊಟ್ಟಿಲ ಮಗು~ ಎಂಬ ವಿನೂತನ ಯೋಜನೆ ಜಾರಿಗೆ ಬಂದಿದ್ದು, ಅನಾಥ ಮಕ್ಕಳಿಗೆ ಪುನರ್‌ವಸತಿ ಕಲ್ಪಿಸುವುದು ಇದರ ಉದ್ದೇಶ. ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ತೊಟ್ಟಿಲು ಇಡಲಾಗುತ್ತಿದ್ದು, ಬಿಟ್ಟುಹೋದ ಅಥವಾ ಒಂಟಿಯಾದ ಮಗು ಕಂಡುಬಂದಲ್ಲಿ ಈ ತೊಟ್ಟಿಲಲ್ಲಿ ಹಾಕಬೇಕು. ದೂರವಾಣಿ ಸಂಖ್ಯೆ 100, 1098 ಸಂಪರ್ಕಿಸಬೇಕು ಎಂದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ಪಿ.ನಾಯಕ, ಜಿ.ಪಂ. ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ಉಪಾಧ್ಯಕ್ಷೆ ಶಾಂತವ್ವ ದಂಡಿನ, ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿ.ಪಂ. ಮುಖ್ಯ ಕಾರ್ಯನಿರ್ವಾಧಿಕಾರಿ ವೀರಣ್ಣ ತುರಮರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.