ADVERTISEMENT

ಬಿರುಗಾಳಿ, ಭಾರಿ ಮಳೆಗೆ ತತ್ತರಿಸಿದ ಗದಗ–ಬೆಟಗೇರಿ

ನಗರಸಭೆ ವತಿಯಿಂದ ಬೆಟಗೇರಿ ರಂಗಪ್ಪಜ್ಜನ ಮಠದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 7:39 IST
Last Updated 3 ಅಕ್ಟೋಬರ್ 2017, 7:39 IST

ಗದಗ: ಭಾನುವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಗದಗ–ಬೆಟಗೇರಿ ಅವಳಿ ನಗರ ತತ್ತರಿಸಿದೆ. ಬೆಟಗೇರಿಯ ರಂಗಾವಧೂತ ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗೆ ಹೊದಿಸಿದ್ದ ತಗಡಿನ ಶೀಟ್‌ಗಳು ಹಾರಿಹೋಗಿದ್ದು, 5 ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದಿವೆ. ಗದಗ ತಾಲ್ಲೂಕು ವ್ಯಾಪ್ತಿಯ ಲಕ್ಕುಂಡಿ, ಅಡವಿಸೋಮಾಪುರ, ಮುಳಗುಂದದಲ್ಲೂ ಬಿರುಗಾಳಿ ಸಹಿತ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ತಾಲ್ಲೂಕಿನ ಕೋಟುಮಚಗಿಯಲ್ಲಿ 6, ಹಾತಲಗೇರಿಯಲ್ಲಿ 1 ಮನೆ ಸೇರಿ ಗ್ರಾಮೀಣ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿಯಾಗಿವೆ. ಟರ್ನಲ್‌ ಪೇಟೆ, ವಿವೇಕಾನಂದ ಬಡಾವಣೆ, ಹಾತಲಗೇರಿ ನಾಕಾ ಬಳಿ ಮರಗಳು ಬುಡಸಹಿತ ಧರೆಗುರುಳಿವೆ. ಬೆಟಗೇರಿ ದಂಡಿನ ದುರ್ಗಮ್ಮ ದೇವಸ್ಥಾನ ಸಮೀಪ 4 ವಿದ್ಯುತ್ ಕಂಬ, ಗ್ರಾಮೀಣ ವ್ಯಾಪ್ತಿಯಲ್ಲಿ 8 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗದಗ ಮಸಾರಿ ಭಾಗದಲ್ಲಿ 5 ವಿದ್ಯುತ್‌ ಪರಿವರ್ತಕಗಳು ಸುಟ್ಟು ಹೋಗಿವೆ. ಬೆಟಗೇರಿಯ ಪರ್ವತಗೌಡ್ರ ಪೆಟ್ರೋಲ್ ಬಂಕ್ ಬಳಿ 3 ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಈ ಭಾಗದಲ್ಲಿ ಭಾನುವಾರ ರಾತ್ರಿಯಿಂದಲೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದೆ. ಸೋಮವಾರ ಬೆಳಿಗ್ಗೆ ನೆಲಕ್ಕುರುಳಿದ್ದ ನಗರಸಭೆ ಸಿಬ್ಬಂದಿ ಮರದ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಿದರು.

ಗಂಜಿಕೇಂದ್ರ ಆರಂಭ: ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿ, ರಂಗಪ್ಪಜ್ಜನ ಮಠ, ಗಣೇಶ ನಗರ, ಶಿವನಾಗ ನಗರ ಸೇರಿದಂತೆ ಬೆಟಗೇರಿ ಭಾಗದಲ್ಲಿ 20ಕ್ಕೂ ಮನೆಗಳ ತಗಡಿನ ಶೀಟುಗಳು ಹಾರಿಹೋಗಿವೆ. ಈ ಪ್ರದೇಶದಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗಿದ್ದ ಮಗ್ಗಗಳು ಹಾನಿಗೊಳಗಾಗಿವೆ. ‘ಮಳೆಯಾಗದಿದ್ದು, ಅರ್ಧಗಂಟೆ ಮಾತ್ರ. ಆದರೆ, ಬಿರುಗಾಳಿಯಿಂದ ಮನೆಗೆ ಹೊದೆಸಿದ್ದ ತಗಡುಗಳು ಹಾರಿಹೋಗಿವೆ. ಸಾವಿರಾರು ರೂಪಾಯಿ ಹಾನಿಯಾಗಿದೆ. ಇಡೀ ಕುಟುಂಬವೇ ಬೀದಿಗೆ ಬಿದ್ದಿದ್ದೇವೆ. ನಗರಸಭೆ ವತಿಯಿಂದ ಪರಿಹಾರ ಒದಗಿಸಬೇಕು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ಎದುರು ಬೆಟಗೇರಿ ನಿವಾಸಿ ಗಿರಿಜಮ್ಮ ಕಿರೇಸೂರ ಮನವಿ ಮಾಡಿಕೊಂಡರು.

ADVERTISEMENT

ನಗರಸಭೆ ಅಧ್ಯಕ್ಷ ಬಿ.ಬಿ ಅಸೂಟಿ, ಉಪಾಧ್ಯಕ್ಷ ಪ್ರಕಾಶ್‌ ಬಾಕಳೆ, ಪೌರಾಯುಕ್ತ ಮನ್ಸೂರ ಅಲಿ ಸೋಮವಾರ ಬೆಟಗೇರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರ ಮಧ್ಯಾಹ್ನದಿಂದ ಬೆಟಗೇರಿ ರಂಗಪ್ಪಜ್ಜನ ಮಠದಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ತೆರೆಯಲಾಗಿದೆ.

ಲಕ್ಕುಂಡಿಯಲ್ಲಿ ನಿರ್ಮಿಸಿದ್ದ ಚೆಕ್‌ಡ್ಯಾಂ ಮಳೆ ನೀರಿನಿಂದ ಭರ್ತಿಯಾಗಿ ಸಮೀಪದ ಜಮೀನಿಗೆ ನೀರು ನುಗ್ಗಿದ್ದರಿಂದ ಅಂದಾಜು 20 ರಿಂದ 25 ಎಕರೆ ಪ್ರದೇಶದಷ್ಟು ಬೆಳೆ ಹಾನಿಯಾಗಿದೆ.

ಶಿರಹಟ್ಟಿ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಮನೆ ಕುಸಿದಿದೆ. ಹೊಲಗಳಿಗೆ ನೀರು ನುಗ್ಗಿ ಬೆಳೆಹಾನಿಯಾಗಿದೆ. ಇಲ್ಲಿಗೆ ಸಮೀಪದ ಅಂಕಲಿ ಗ್ರಾಮದಲ್ಲಿ ಚೆಕ್‌ ಡ್ಯಾಂ ತುಂಬಿ ಹರಿದಿದ್ದು, ಪಕ್ಕದ ವೀರಭದ್ರಯ್ಯ ಮಠದ ಅವರ ಜಮೀನಿಗೆ ನೀರು ನುಗ್ಗಿ, ಬೆಳೆಹಾನಿಯಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ರಭಸದ ಮಳೆ ಆಗಿದ್ದು, ಹೊಲಗಳ ಬದುವು ಒಡೆದು ಜಮೀನು ಜಲಾವೃತಗೊಂಡಿದೆ. ಬೆಳ್ಳಟ್ಟಿ ಗ್ರಾಮದಲ್ಲಿ ಯಶೋಧಾ ಕುರವತ್ತಿ ಅವರ ಮನೆ ಸಂಪೂರ್ಣ ನೆಲಕಚ್ಚಿದೆ. ಮಣ್ಣಿನ ಮನೆ ಹೊಂದಿದವರು, ಕುಸಿದು ಬೀಳಬಹುದು ಎಂಬ ಭಯದಿಂದ ವಾಸಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಪ್ರಸಿದ್ದ ಪಕ್ಷಿಧಾಮ ಮಾಗಡಿ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಕಳೆದ ವರ್ಷ ಕೆರೆ ಬತ್ತಿದ ಪರಿಣಾಮ ಇಲ್ಲಿಗೆ ವಲಸೆ ಬರುತ್ತಿದ್ದ ವಿದೇಶಿ ಪಕ್ಷಿಗಳು ಬೇರೆ ಕೆರೆಗಳಿಗೆ ತಾಣ ಬದಲಿಸಿದ್ದವು. ಸೋಮವಾರ ಸಂಜೆ ಮುಂಡರಗಿ ತಾಲ್ಲೂಕು ವ್ಯಾಪ್ತಿಯಲ್ಲೂ ಭರ್ಜರಿ ಮಳೆಯಾಗಿದೆ.

***
ನಗರಸಭೆ ವತಿಯಿಂದ ಬೆಟಗೇರಿ ರಂಗಪ್ಪಜ್ಜನ ಮಠದಲ್ಲಿ ಸೋಮವಾರ ಮಧ್ಯಾಹ್ನದಿಂದ ತಾತ್ಕಾಲಿಕ ಗಂಜಿ ಕೇಂದ್ರ ಪ್ರಾರಂಭಿಸಲಾಗಿದೆ. ಎರಡು ಮೂರು ದಿನಗಳ ಕಾಲ ಇದು ಮುಂದುವರಿಯಲಿದೆ. ಈ ಭಾಗದಲ್ಲಿ ಗಾಳಿಯಿಂದ ಆಗಿರುವ ಹಾನಿ ಕುರಿತು ಪರಿಶೀಲಿಸುತ್ತಿದ್ದೇವೆ.

– ಬಿ.ಬಿ. ಅಸೂಟಿ, ಗದಗ–ಬೆಟಗೇರಿ ನಗರಸಭೆ ಅಧ್ಯಕ್ಷ

***

ಮಳೆಗೆ ಬೆಟಗೇರಿ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದ್ದು, ಪರಿಶೀಲಿಸಿ, ವರದಿ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರದಿಯನ್ನು ತಹಶೀಲ್ದಾರರಿಗೆ ಸಲ್ಲಿಸುತ್ತೇವೆ.
ಬಸವರಾಜ ಕನ್ನೂರ, ಕಂದಾಯ ನಿರೀಕ್ಷಕ, ಬೆಟಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.