ರೋಣ: ಕಳೆದ ವರ್ಷ ಬಿದ್ದ ಆಕಾಲಿಕ ಮಳೆಯಿಂದ ಹಾನಿಗೀಡಾದ ಈರುಳ್ಳಿ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಿದ್ದರೂ ರೈತರಿಗೆ ಇದುವರೆಗೆ ವಿತರಣೆ ಮಾಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಪ್ರಕಾಶ ಹೊಸಳ್ಳಿ ಹೇಳಿದರು.
ಈರುಳ್ಳಿ ಬೆಳೆಹಾನಿ ಪರಿಹಾರವನ್ನು ಬಿಡುಗಡೆ ಮಾಡುವಂತೆ ಉಪ ತಹಶೀಲ್ದಾರ್ ಎಸ್.ಎಸ್. ಹಿರೇಮಠ ಅವರ ಮೂಲಕ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ ನಂತರ ಮಾತನಾಡಿ, ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ₨ 9 ಸಾವಿರ ರೂಪಾಯಿ ಪರಿಹಾರ ಧನ ಮಂಜೂರಾಗಿದೆ. ಆದರೆ ರೋಣ ತಾಲ್ಲೂಕಿನಲ್ಲಿ 22317 ರೈತರು ಈರುಳ್ಳಿ ಬೆಳೆದಿದ್ದರು. ಇವರಲ್ಲಿ ಕೆಲವರಿಗೆ ವಿತರಣೆಯಾಗಿದೆ. ಒಟ್ಟು ₨ 12 ಕೋಟಿ ಮೌಲ್ಯದ ಕೂಪನ್ ವಿತರಿಸಲಾಗಿದೆ. ಅದರಲ್ಲಿ ₨ 4 ಕೋಟಿ ಪರಿಹಾರ ಮಾತ್ರ ವಿತರಣೆಯಾಗಿದೆ. ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದು ಬೇಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂಗಾರು ಮಳೆ ಬಿದ್ದಿದ್ದು, ಬಿತ್ತನೆಗೆ ರೈತರು ಸಿದ್ಧವಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಧನ ಮಂಜೂರು ಮಾಡಿ, ಸಮಸ್ಯೆಗೆ ಪರಿಹಾರ ಸೂಚಿಸಬೇಕು, ಇದೇ 23ರ ಒಳಗಾಗಿ ಪರಿಹಾರ ಧನ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ 25ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಉಪ ತಹಶೀಲ್ದಾರ್ ಎಸ್.ಎಸ್. ಹಿರೇಮಠ ಮನವಿ ಸ್ವೀಕರಿಸಿ ಮಾತನಾಡಿದರು. ಸರ್ಕಾರದಿಂದ ಮಂಜೂರಾಗಿ ಬಂದಿದ್ದ ₨ 4.40 ಕೋಟಿಯನ್ನು ರೈತರಿಗೆ ಕೂಪನ್ ಮೂಲಕ ಬ್ಯಾಂಕ್ ಖಾತೆಗೆ ವಿತರಿಸಲಾಗಿದೆ. ಇನ್ನೂ ₨ 7 ಕೋಟಿ ಬಾಕಿ ಪಾವತಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಹಣ ಬಿಡುಗಡೆಯಾದ ತಕ್ಷಣ ಪರಿಹಾರ ನೀಡಲಾಗುವುದು ಎಂದರು.
ಮಲ್ಲು ಮಾದರ ಮಾತನಾಡಿದರು. ಮೌನೇಶ ಹಾದಿಮನಿ, ಮಂಜುನಾಥ ಹಾಳಕೇರಿ, ಹನುಮಂತ ಮಾದರ, ಬಿ.ಎಂ. ದಳವಾಯಿ, ಕೆ.ಎಂ. ದಳವಾಯಿ, ಹಿರಿಯಪ್ಪ ಹಲಗಿ, ಶರಣಪ್ಪ ದೊಡ್ಡಮನಿ, ಎಂ.ಆರ್. ಸಂಕನೂರ, ಶಂಕ್ರಪ್ಪ ಗುದ್ದೆಣ್ಣವರ, ಶಾಂತಪ್ಪ ಕೊಡತಗೇರಿ, ಪ್ರಶಾಂತ ಕಡಗದ, ಪರಶುರಾಮ ಮಾದರ, ನಿಂಗಪ್ಪ ಜಿಗಳೂರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.