ADVERTISEMENT

ಬೇಸಿಗೆ ರಜೆ ಕಳೆಯಿತು; ಬಾ ಮರಳಿ ಶಾಲೆಗೆ

ತಳಿರು ತೋರಣಗಳಿಂದ ಸಿಂಗಾರಗೊಂಡ ಶಾಲೆಗಳು; ಪ್ರಾರಂಭೋತ್ಸವಕ್ಕೆ ಸಿದ್ಧತೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 29 ಮೇ 2018, 12:35 IST
Last Updated 29 ಮೇ 2018, 12:35 IST
ಸೋಮವಾರ ಶಾಲೆಗೆ ಬಂದಿದ್ದ ಪುಟಾಣಿಗಳು ಶಾಲಾ ಪ್ರಾರಂಭೋತ್ಸವ ಮಂಗಳವಾರ ಎಂದು ತಿಳಿದು ಮರಳಿ ಮನೆಯತ್ತ ಹೆಜ್ಜೆ ಹಾಕಿದರು
ಸೋಮವಾರ ಶಾಲೆಗೆ ಬಂದಿದ್ದ ಪುಟಾಣಿಗಳು ಶಾಲಾ ಪ್ರಾರಂಭೋತ್ಸವ ಮಂಗಳವಾರ ಎಂದು ತಿಳಿದು ಮರಳಿ ಮನೆಯತ್ತ ಹೆಜ್ಜೆ ಹಾಕಿದರು   

ಗದಗ: ಎರಡು ತಿಂಗಳ ಬೇಸಿಗೆ ರಜೆ ಕಳೆದ ಹಿನ್ನೆಲೆಯಲ್ಲಿ ಶಾಲೆಗಳು ಮರಳಿ ವಿದ್ಯಾರ್ಥಿಗಳನ್ನು ತರಗತಿ ಕೋಣೆಗೆ ಸ್ವಾಗತಿಸಲು ಸಿದ್ಧವಾಗಿದೆ. ಮಂಗಳವಾರ ಜಿಲ್ಲೆಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಶಾಲಾ ಪ್ರಾರಂಭೋತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸೋಮವಾರವೇ ಶಾಲೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡು, ಮಕ್ಕಳನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿವೆ. ಹಲವೆಡೆ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯಲಾಗಿದೆ. ಕೊಠಡಿಗಳು, ಅಡುಗೆ ಕೋಣೆ, ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ಸೋಮವಾರ ಶಾಲೆಗೆ ಬಂದ ಶಿಕ್ಷಕರು ದಿನವಿಡೀ ಶಾಲೆಯಲ್ಲಿದ್ದು, ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿ ಮನೆಗೆ ಮರಳಿದರು. ಸೋಮವಾರ ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲು, ಬಳಿಕ ಸಿಹಿಯೂಟ ಬಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಸೋಮವಾರವೇ ಶಾಲೆಗೆ ಬಂದಿದ್ದರು: ಶಾಲಾ ಪ್ರಾರಂಭೋತ್ಸವ ಸೋಮವಾರವೇ ಇದೆಯೆಂದು ಭಾವಿಸಿ, ಸಾಕಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಕೆಲವೆಡೆ ಒಂದನೆಯ ತರಗತಿಗೆ ಹೊಸದಾಗಿ ಪ್ರವೇಶ ಪಡೆದ ಪುಟಾಣಿಗಳನ್ನು ಕರೆದುಕೊಂಡು ಪಾಲಕರು ಶಾಲೆಗೆ ಬಂದಿದ್ದರು. ಅವರನ್ನು ಶಾಲೆ ಪ್ರಾರಂಭೋತ್ಸವ ಮೇ 29ಕ್ಕೆ ಇದೆ ಎಂದು ತಿಳಿಸಿ ಮರಳಿ ಮನೆಗೆ ಕಳುಹಿಸಲಾಯಿತು.

ADVERTISEMENT

ಶಾಲೆಗೆ ಬಂದಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ತರಗತಿ ಕೋಣೆ, ಮತ್ತು ತಮಗೆ ಇಷ್ಟವಾದ ಬೆಂಚ್‌ಗಳನ್ನು ಸರಿಪಡಿಸಿ ಇಟ್ಟುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.ಇನ್ನು ಕೆಲವರು ಶಾಲಾ ಕೊಠಡಿ, ಶಾಲಾ ಆವರಣ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ನಂತರ ಮಧ್ಯಾಹ್ನ ಚಿತ್ರಾನ್ನ ಸೇವಿಸಿ ಮನೆಗೆ ಮರಳಿದರು.

ಶೇ 71ರಷ್ಟು ಪಠ್ಯಪುಸ್ತಕ ವಿತರಣೆ: ಮೇ 21ರವರೆಗಿನ ಅಂಕಿ ಅಂಶದಂತೆ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಶೇ 71ರಷ್ಟು ಪಠ್ಯಪುಸಕ್ತಗಳನ್ನು ಪೂರೈಕೆಯಾಗಿವೆ. ಬೇಡಿಕೆಗೆ ಹೋಲಿಸಿದರೆ ಇನ್ನೂ 3.32 ಲಕ್ಷದಷ್ಟು ಪಠ್ಯಪುಸ್ತಕ ಬರಬೇಕಿದೆ. ಜೂನ್ ತಿಂಗಳ 2ನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಇಲಾಖೆ ಚಿಂತನೆ ನಡೆಸಿದೆ.

ಕೆಲವು ದಿನಗಳ ಹಿಂದೆ ಎಸ್‌ಡಿಎಂಸಿ ಸಭೆ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಪ್ರಾರಂಭೋತ್ಸವದ ಬಗ್ಗೆ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿರುವ ಜನಪ್ರತಿನಿಧಿಗಳಿಗೆ ಹಾಗೂ ಎಸ್‌ಡಿಎಂಸಿ ಸದಸ್ಯರಿಗೆ ತಿಳಿವಳಿಕೆ ಪತ್ರ ನೀಡಿದೆ.

ಶಾಲಾ ಸ್ವಚ್ಛತೆ, ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ವರ್ಗವಾರು ಪಠ್ಯಪುಸ್ತಕ ವಿತರಿಸುವುದು, ಮಕ್ಕಳ ದಾಖಲಾತಿ ಆಂದೋಲನ, ಹಾಜರಾತಿ ವಿವರ, ಶಿಕ್ಷಕರ ಹಾಜರಾತಿ ಪರಿಶೀಲನೆ ಮಾಡುವ ಕುರಿತು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲ ಶಾಲಾ ಮುಖ್ಯಶಿಕ್ಷಕರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ತಾಲ್ಲೂಕಿನ ಸಿಆರ್‌ಪಿ, ಬಿಆರ್‌ಪಿ, ಬಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ, ಸೇತುಬಂಧ ಸಿದ್ಧತೆ, ವಾರ್ಷಿಕ ಅಂದಾಜು ಪತ್ರಿಕೆ, ಶಾಲಾ ಸಂಯುಕ್ತ ವೇಳಾ ಪಟ್ಟಿ, ಶಿಕ್ಷಕರ ಬೋಧನಾ ವೇಳಾಪಟ್ಟಿ, ಪಠ್ಯದ ಉಪಕರಣಗಳು, ಶಿಕ್ಷಕರ ಬೋಧನಾ ಪ್ರಕ್ರಿಯೆ ಪೂರ್ವ ಸಿದ್ಧತೆ ಕುರಿತು ಅವಲೋಕನ ಮಾಡಿ, ಲಿಖಿತ ವಿವರ ದಾಖಲಿಸುವಂತೆ ತಿಳಿಸಲಾಗಿದೆ.

ಜೂನ್ ಮೊದಲ ವಾರದಲ್ಲಿ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ವಿಷಯವಾರು ಶಿಕ್ಷಕರು ಉತ್ತರ ಪತ್ರಿಕೆಗಳನ್ನು ವಿಶ್ಲೇಷಿಸಿ, ಫಲಿತಾಂಶ ಪಟ್ಟಿ ತಯಾರಿಸುವುದು.

ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕಾ ಹಂತವನ್ನು ವಿಷಯವಾರು ಗುರುತಿಸಿ, ನ್ಯೂನತೆಗಳನ್ನು ಪಟ್ಟಿ ಮಾಡಲು ಇಲಾಖೆಯು ಮುಖ್ಯಶಿಕ್ಷಕರಿಗೆ ಹೇಳಿದೆ.

ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು ಮೇ 29ರಿಂದ ಜೂನ್‌ 17ರವರೆಗೆ ಆಯಾ ಶಾಲೆಗಳಿಗೆ ಭೇಟಿ ನೀಡಿ, ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಇಲಾಖೆ ಸೂಚನೆ ನೀಡಿದೆ.

ಮೊದಲ ದಿನ ಸಿಹಿಯೂಟ

ಶಾಲಾ ಪ್ರಾರಂಭೋತ್ಸವದ ಮೊದಲ ದಿನ ಸರ್ಕಾರಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ಊಟ ಭಾಗ್ಯ ಲಭಿಸಲಿದೆ. ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲು ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ರುದ್ರಪ್ಪ ಹೇಳಿದರು.

‘ಶಾಲಾ ಕೊಠಡಿ, ಅಡುಗೆ ಕೋಣೆ, ಆವರಣ ಸ್ವಚ್ಛಗೊಳಿಸಲಾಗಿದೆ. ಸೋಮವಾರ ಕೆಲವು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಈಗಾಗಲೇ ದಾಖಲಾತಿ ಆಂದೋಲನ ಕೈಗೊಳ್ಳಲಾಗಿದೆ. ಎಲ್ಲ ಮಕ್ಕಳು ತರಗತಿಗೆ ಹಾಜರಾಗಲು 15 ದಿನಗಳು ಬೇಕಾಗುತ್ತದೆ’ ಎಂದು ಕೆ.ಸಿ.ರಾಣಿ ರಸ್ತೆ ಬಳಿಯಿರುವ 5ನೇ ನಂಬರ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೈ.ಎ.ಕವಳಿ ಅಭಿಪ್ರಾಯಪಟ್ಟರು.

**
ಶೇ 80ರಷ್ಟು ಪಠ್ಯಪುಸ್ತಕಗಳು ಬಂದಿದ್ದು, ಬಿಇಒ ಮೂಲಕ ವಿತರಣೆ ಮಾಡಲಾಗಿದೆ. ಈಗಿನಿಂದಲೇ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗಿದೆ 
ಜಿ. ರುದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

**
ಕಳೆದ 3 ದಿನಗಳಿಂದ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಶಾಲೆಯ ಕೊಠಡಿ, ಆವರಣವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ
 – ಪಿ.ಎಲ್.ರಾಠೋಡ, ಮುಖ್ಯಶಿಕ್ಷಕ, 6ನೇ ನಂಬರ್‌ ಶಾಲೆ, ಬಸವೇಶ್ವರ ನಗರ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.