ಗದಗ: ಸತ್ಯ, ಅಹಿಂಸೆ ಹಾಗೂ ಜ್ಞಾನದ ಬಲದಿಂದ ಭಾರತ ದೇಶ ಶ್ರೇಷ್ಠ ನಾಗರಿಕತೆಯನ್ನು ಹೊಂದಿದೆ ಎಂದು ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಜೆ.ಎಸ್. ಪಾಟೀಲ ಹೇಳಿದರು. ನಗರದ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಮನೋರಮ ಬಿಸಿಎ ಹಾಗೂ ಬಿಬಿಎ ಮಹಾವಿದ್ಯಾಲಯದ ರಾಜ್ಯಮಟ್ಟದ ‘ಅನ್ವೇಷಣಾ-2011’ಐಟಿ ಹಾಗೂ ಮ್ಯಾನೇಜ್‌ಮೆಂಟ್ ಫೆಸ್ಟಿವಲ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂದಿನ ಯುವ ಜನಾಂಗಕ್ಕೆ ಶಿಕ್ಷಣ ಅತ್ಯವಶ್ಯಕವಾಗಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಕಾರ್ಪೊರೇಟ್ ವಲಯದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಮನೋರಮಾಬಾಯಿ ಕುಡತರಕರ ಫೌಂಡೇಶನ್ ಅಧ್ಯಕ್ಷ ಮೋಹನ ಕುಡತರಕರ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳನ್ನು ಔದ್ಯಮಿಕ ಹಾಗೂ ತಾಂತ್ರಿಕ ವಲಯದಲ್ಲಿ ನೈಪುಣ್ಯತೆಯನ್ನು ಪಡೆಯುವ ನಿಟ್ಟಿನಲ್ಲಿ ಇಂತಹ ಐಟಿ ಹಾಗೂ ಮ್ಯಾನೇಜ್‌ಮೆಂಟ್ ಮೇಳಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಶಿಸ್ತು, ಸ್ಪರ್ಧಾ ಮನೋಭಾವ, ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.
ಅನ್ವೇಷಣಾ 2011 ಐಟಿ ಹಾಗೂ ಮ್ಯಾನೇಜ್‌ಮೆಂಟ್ ಫೆಸ್ಟಿವಲ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ 17 ತಂಡಗಳು ಭಾಗವಹಿಸಿದ್ದವು. ಪ್ರಾಚಾರ್ಯ ಟಿ.ಬಿ. ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರ್ಗವಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೇಮಾನಂದ ರೋಣದ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಗಿರೀಶ ಖಟವಟೆ ಸ್ವಾಗತಿಸಿದರು. ಖುಷ್ಬು ಜೈನ್ ಹಾಗೂ ಚೇತನ ಜೈನ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾ ವೀರಾಪೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.