ಗದಗ: ಕೆಐಎಡಿಬಿ ಹರ್ಲಾಪೂರ, ಲಕ್ಕುಂಡಿ, ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ, ಮೇವುಂಡಿ, ಜಂತ್ಲಿ- ಶಿರೂರ ಗ್ರಾಮಗಳಲ್ಲಿ ಐದು ಸಾವಿರ ಎಕರೆ ಜಮೀನು ಸ್ವಾಧೀನಪ ಡಿಸಿಕೊಳ್ಳುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ದಿವ್ಯ ಕರ್ನಾಟಕದ ಮುಖ್ಯಸ್ಥ ಚಂದ್ರಶೇಖರ ಬಾಳೆ ಹೇಳಿದರು.
ತಾಲ್ಲೂಕಿನ ಲಕ್ಕುಂಡಿಯ ಅನ್ನದಾನೇಶ್ವರ ಮಠದಲ್ಲಿ ಗುರುವಾರ ನಡೆದ ಗ್ರಾಮಗಳ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಬಂಡವಾಳ ಶಾಹಿಗಳಿಗೆ ಮಣೆಹಾಕಿ ರೈತರಿಗೆ ಅನ್ಯಾಯ ಮಾಡುತ್ತಿದೆ.
ಭೂಮಿಯೇ ರೈತರ ಸರ್ವಸ್ವ ಆಗಿದ್ದರಿಂದ ಭೂಮಿಯನ್ನು ಕಳೆದುಕೊಂಡರೆ ರೈತರ ಬದುಕು ಚಿಂತಾಜನಕವಾಗುತ್ತದೆ. ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ರೈತರ ಜಮೀನು ಕಸಿದು ಕೈಗಾರಿಕೋದ್ಯಮಿಗಳಿಗೆ ಕೊಡಲು ಹೊರಟಿದ್ದಾರೆ. ಫಲವತ್ತಾದ ಜಮೀನನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಆದರೆ, ಈ ಸರ್ಕಾರ ರೈತರ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ. ಈಗ ಜಾರಿಯಲ್ಲಿರುವ ಭೂ ಸ್ವಾಧೀನ ಕಾಯ್ದೆ ಗೂಂಡಾ ಕಾಯ್ದೆಯಾಗಿದೆ. ರೈತರ ಅಭಿಪ್ರಾಯ ಮನ್ನಿಸದೆ, ಬಲವಂತವಾಗಿ ರೈತರ ಜಮೀನನ್ನು ಸ್ವಾಧೀನಪಡಿಸಿ ಕೊಳ್ಳಲಾಗುತ್ತಿದೆ. ಇದರ ವಿರುದ್ಧ ರೈತರು ಹೋರಾಟಕ್ಕೆ ಸಿದ್ಧರಾಗಬೇಕು. ಇಲ್ಲಿನ ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಸಾವಯವ ಕೃಷಿ ಮಿಷನ್ ಉಪನ್ಯಾಸಕ ಸುರೇಶಗೌಡ ಪಾಟೀಲ ಮಾತನಾಡಿ, ರೈತರು ಸರ್ಕಾರದ ಆಮಿಷಗಳಿಗೆ ಒಳಗಾಗದೆ, ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಕೆಲವು ರೈತರು ಜಮೀನು ನೀಡಲು ಮುಂದಾಗಿದ್ದಾರೆ, ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ. ಸರ್ಕಾರ ಈ ರೀತಿ ರೈತರಲ್ಲಿ ಒಡಕು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾವಯವ ಕೃಷಿ ಮಿಷನ್ ನಿರ್ದೇಶಕ ಚನ್ನಬಸಪ್ಪ ಬೂದಿಹಾಳ ಮಾತನಾಡಿ, ಸರ್ಕಾರ ಹೇಳುವುದು ಒಂದು, ಮಾಡುವುದು ಮತ್ತೊಂದು. ರೈತರ ಬಗ್ಗೆ ಮಾತನಾಡುವ ಸರ್ಕಾರ ಈಗ ಅವರ ಜಮೀನು ಕಸಿದುಕೊಂಡು ಅವರನ್ನು ದಿವಾಳಿ ಮಾಡಲು ಹೊರಟಿದೆ. ಈ ಬಗ್ಗೆ ರೈತರು ಜಾಗೃತರಾಗಿದ್ದು, ಒಗ್ಗಟ್ಟಿನಿಂದ ತಮ್ಮ ಜಮೀನು ಉಳಿಸಿಕೊಳ್ಳಲು ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಸಂಕನಗೌಡರ, ಮಹಾದೇವಪ್ಪ ಹಳ್ಳಿಗುಡಿ, ಅಮರೇಶ ಕೆಐಎಡಿಬಿಗೆ ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ. ಜಮೀನು ಉಳಿಸಿಕೊಳ್ಳಲು ಎಂಥಹ ಹೋರಾಟಕ್ಕಾದರೂ ಸಿದ್ಧರಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.