ADVERTISEMENT

ಭೈರಾಪುರ: ಹನಿಹನಿ ನೀರಿಗೂ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:00 IST
Last Updated 17 ಮಾರ್ಚ್ 2012, 9:00 IST

ಗಜೇಂದ್ರಗಡ: ಕುಗ್ರಾಮ ಭೈರಾಪೂರ ಗ್ರಾಮಸ್ಥರಿಗೆ ಈ ವರ್ಷದ ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ದಕ್ಷಿಣ ಕಾಶಿ ಪ್ರಸಿದ್ಧಿಯ ಐತಿಹಾಸಿಕ ಶ್ರೀಕಾಲಕಾಲೇಶ್ವರ ಬೆಟ್ಟದ ಮೇಲಿರುವ ಅವಳಿ ಕುಗ್ರಾಮಗಳೆಂದೇ ಪ್ರಖ್ಯಾತಿ ಹೊಂದಿರುವ ಭೈರಾಪೂರ ಹಾಗೂ ಭೈರಾಪೂರ ತಾಂಡಾ ಜನತೆ ಆಧುನಿಕತೆಯ ಮಧ್ಯೆಯೂ ನಾಗರಿಕ ಸೌಲಭ್ಯಗಳಿಂದ ದೂರ ಉಳಿದು ಬದುಕು ಸಾಗಿಸುತ್ತ್ದ್ದಿದಾರೆ.

ಈ ವರ್ಷ ವಾಡಿಕೆಯಂತೆ ಮಳೆ ಸುರಿಯದ ಪರಿಣಾಮ ಬರ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಭೈರಾಪೂರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಬವಣೆ ನಿವಾರಿಸುತ್ತಿದ್ದ ಕೊಳವೆ ಬಾವಿಗಳು ಸಂಪೂರ್ಣ ಬತ್ತಿವೆ. ಪರಿಣಾಮ ಹನಿ ನೀರಿಗೂ ಹಾಹಾಕಾರ ಪಡುವಂತಾಗಿದೆ.

ಗ್ರಾಮಸ್ಥರಿಗೆ ಸಮರ್ಪಕ ನೀರು ಒದಗಿಸುವ ನಿಟ್ಟಿನಲ್ಲಿ ಕೊರೆಯಿಸಲಾದ ಮೂರು ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟ ಕುಸಿದಿವೆ. ಇದರಿಂದ ನಾಗರಿಕರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ತೀವ್ರ ತೊಂದರೆ ಉಂಟಾಗಿದೆ.

ಬಹುತೇಕ ದಲಿತ ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳೇ ವ್ಯಾಪಕವಾಗಿ ನೆಲೆಸಿರುವ ಭೈರಾಪೂರ ಗ್ರಾಮದಲ್ಲಿ 600 ಜನ ಸಂಖ್ಯೆ ಹೊಂದಿವೆ. ಇವರಲ್ಲಿ ಶೇ.55ರಷ್ಟು ಅನಕ್ಷರಸ್ಥರೇ. ದನ-ಕರುಗಳು, ಕೋಳಿ-ಕುರಿ ಸಾಕಾಣಿಕೆಯ ಜೊತೆಗೆ ಕೆಂಪು ಮಿಶ್ರಿತ ಜವಗು ಪ್ರದೇಶದಲ್ಲಿ ಉಳುಮೆ ಮಾಡುತ್ತ ಬದುಕಿನ ಬಂಡಿ ಎಳೆಯುತ್ತಿರುವ ಗ್ರಾಮಸ್ಥರು ತಮ್ಮ ಬೇಕು ಬೇಡಗಳಿಗಾಗಿ 12 ಕಿ.ಮೀ ದೂರದ ಗಜೇಂದ್ರಗಡ ಪಟ್ಟಣವನ್ನೇ ಆಶ್ರಯಿಸಿದ್ದಾರೆ.

ಇಕ್ಕಟ್ಟಾದ ದುರ್ಗಮ ತಿರುಗು ರಸ್ತೆಯ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಇರುವ ಭೈರಾಪೂರ ಗ್ರಾಮಸ್ಥರಿಗೆ ಎದುರಾದ ನೀರಿನ ಬವಣೆಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜೂರ ಗ್ರಾಮ ಪಂಚಾಯಿತಿ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದೆ. 

ಗ್ರಾಮದಲ್ಲಿನ ಜನ ಸಂಖ್ಯೆ ಹಾಗೂ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮುಂಜಾನೆ ಮತ್ತು ಸಂಜೆ ಎರಡು ಬಾರಿ ಟ್ಯಾಂಕರ್ ಮೂಲಕ ನೀರು ತಂದು ಗ್ರಾಮಸ್ಥರಿಗೆ ನೀರು ಒದಗಿಸಲಾಗುತ್ತಿದೆ. ಹೀಗೆ ಒದಗಿಸಲಾಗುವ ಅಲ್ಪ ಪ್ರಮಾಣದ ನೀರಿನಿಂದಾಗಿ ಸಮರ್ಪಕ ನೀರು ದೊರೆಯುತ್ತಿಲ್ಲ ಎಂಬ ಕೊರಗು ಗ್ರಾಮಸ್ಥರದ್ದಾಗಿದೆ.

ಕೆಲವು ಬಾರಿ ವಿದ್ಯುತ್ ಕೈಕೊಟ್ಟಾಗ ಗ್ರಾಮಸ್ಥರಿಗೆ ಸಮರ್ಪಕ ನೀರು ದೊರೆಯುವುದಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕದ ಬಗ್ಗೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವ ಗ್ರಾಮಸ್ಥರು ಗ್ರಾಮಕ್ಕೆ ನೀರಿನ ಟ್ಯಾಂಕರ್ ಆಗಮಿಸುತ್ತಿದ್ದಂತೆ ಮುಗಿಬಿದ್ದು, ನೀರು ಪಡೆಯಲು ಹರ ಸಾಹಸ ಪಡುತ್ತಿದ್ದಾರೆ. ಹಾಗೊಂದು ವೇಳೆ ಕಾರಣಾಂತರಗಳಿಂದ ನೀರಿನ ಟ್ಯಾಂಕರ್ ಗ್ರಾಮಕ್ಕೆ ಬಾರದಿದ್ದರೆ ನಾಗರಿಕರ ಹಾಗೂ ಜಾನುವಾರಗಳ ಪಾಡು ದೇವರಿಗೆ ಪ್ರೀತಿ.  

ಕುಗ್ರಾಮ ಭೈರಾಪೂರ ಗ್ರಾಮದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಟ್ಟದ ಕೆಳಗಿನ ಜಿಗೇರಿ ಗ್ರಾಮದ ಕೆರೆಯ ಪಕ್ಕದಲ್ಲಿ ಕೊರೆಯಿಸಲಾದ ಕೊಳವೆ ಬಾವಿಯ ನೀರನ್ನು ಪೈಪ್ ಲೈನ್ ಮೂಲಕ ಗ್ರಾಮಕ್ಕೆ ದೊರಕಿಸುವ ನಿಟ್ಟಿನಲ್ಲಿ 32 ಲಕ್ಷ ರೂಪಾಯಿಯ ಯೋಜನೆಯನ್ನು ರೂಪಿಸಲಾಗಿದೆ. ಕಳೆದ ತಿಂಗಳು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕಾಮಗಾರಿ ತ್ವರಿತ ಗತಿಯಲ್ಲಿ ಅಂತ್ಯವಾದರೆ ಬೇಸಿಗೆ ಬವಣೆ ನೀಗಿಸಲು ಸಹಕಾರಿಯಾಗುವುದು ಎಂಬುದು ಗ್ರಾಮಸ್ಥರ ಆಶಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.