ಗದಗ: `ಅಧಿಕಾರ ದುರುಪಯೋಗ ಸಾಕು, ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ~ ಆಂದೋಲನದ ಅಂಗವಾಗಿ ಸೋಮವಾರ ಜನ ಸಂಗ್ರಾಮ ಪರಿಷತ್ ನೇತೃತ್ವದಲ್ಲಿ ಮಹಿಳೆಯರು ನಗರದಲ್ಲಿ ಮೆರವಣಿಗೆ ನಡೆಸಿದರು.
ಕರ್ನಾಟಕ ಹಾಗೂ ಇಂಡಿಯನ್ ಕಮ್ಯೂನಿಟಿ ಆಕ್ಟಿವಿಸ್ಟ್ ನೆಟ್‌ವರ್ಕ್, ಶಿರಹಟ್ಟಿ ತಾಲ್ಲೂಕು ಸ್ವ-ಸಹಾಯ ಸಂಘಟನೆಗಳು ಮಾಚೇನಹಳ್ಳಿ, ಕಡಕೋಳ ಹಾಗೂ ಡೋಣಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ `ಉಳಿಸಿ ಉಳಿಸಿ ಕೃಷಿ ಭೂಮಿ ಊಳಿಸಿ, ಬೇಡ ಬೇಡ ಭ್ರಷ್ಟಾಚಾರ ಬೇಡ, ಹಸಿರೇ ಉಸಿರು~ ಎಂಬ ಫಲಕಗಳನ್ನು ಮೆರವಣಿ ಗೆಯಲ್ಲಿ ಹಿಡಿದು ಸಾಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಮಾಜ ಪರಿವರ್ತನ ಸಮುದಾಯ ಖಂಜಾಂಚಿ ಐ.ಜಿ.ಪುಲ್ಲಿ ಮಾತನಾಡಿ, ಗ್ರಾಮ ಸಭೆಗೆ ಪರಮಾಧಿಕಾರ ನೀಡಬೇಕು. ನಮ್ಮೂರಿಗೆ ನಾವೆ ಸರ್ಕಾರ ಆಗುವವರೆಗೆ ದೇಶದ ಅಭಿವೃದ್ಧಿ ಅಸಾಧ್ಯ. ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ ಆಂದೋಲನವನ್ನು ರಾಜ್ಯಾದಾದ್ಯಂತ ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.
ಡಾ. ಬಸವರಾಜ ಧಾರವಾಡ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಆಗುವವರೆಗೆ ದೇಶದಲ್ಲಿ ಸಮಾನತೆ ಸಮಬಾಳು ತರುವುದು ಕಷ್ಟ. ಈ ನಿಟ್ಟಿನಲ್ಲಿ ಹಿರೇಮಠರ ಸಮಾಜಮುಖಿ ಹೋರಾಟ ಪ್ರತಿಯೊಬ್ಬ ಯುವಕರಿಗೆ ಪ್ರೇರಣೆಯಾಗಬೇಕಾಗಿದೆ ಎಂದರು.
ಅನ್ಯಾಯದ ವಿರುದ್ಧ ಹೋರಾಡುವ ಯುವಕ- ಯುವತಿಯರು, ಸಮಾಜ ಮುಖಿ ಚಿಂತಕರು, ಸಾಹಿತಿಗಳು ಭಾಗವಹಿಸಬೇಕೆಂದು ಜನಸಂಗ್ರಾಮ ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಗೋಣಿಬಸಪ್ಪ ಕೊರ್ಲಹಳ್ಳಿ ತಿಳಿಸಿದ್ದಾರೆ.
ನಿವೃತ್ತ ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ಎಸ್.ಟಿ.ಬ್ಯಾಕೋಡ, ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನ ಗೌಡ ಗೋವಿಂದಗೌಡ್ರ, ವಿಜಯ ಕಲ್ಮನಿ, ಸಮಾಜ ಪರಿವರ್ತನಾ ಸಮುದಾಯದ ಡಿ.ಜಿ.ಚಿಕ್ಕೇರಿ, ಎಸ್.ಎ.ಮಕ್ಕಾಬಿ, ಲೀಲಾವತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.