ಗದಗ: ಬಡತನ ಹಾಗೂ ಮೌಢ್ಯತೆಯಿಂದ ಸಾಕಷ್ಟು ಮಕ್ಕಳು ಶಾಲೆಯಿಂದ ಈಗಲೂ ಹೊರಗೆ ಉಳಿದಿದ್ದು, ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಾಲೆಗೆ ಕಳುಹಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಚ್.ಆವಿನ ಅವರು ಪೋಷಕರಿಗೆ ಕರೆ ನೀಡಿದರು.
ಬೆಟಗೇರಿಯ ಸೇಂಟ್ ಜಾನ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳು ಶಾಲೆಗೆ ಹೋಗಬೇಕು.
ಉಚಿತ ಕಡ್ಡಾಯ ಶಿಕ್ಷಣದೊಂದಿಗೆ ಹಲವಾರು ಸೌಲಭ್ಯ ಸರ್ಕಾರ ಒದಗಿಸಿದೆ. ಸೌಲಭ್ಯ ಪಡೆದುಕೊಂಡು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಾಲೆಗೆ ಕಳುಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳನ್ನು ಈಗಲೂ ರೇಷ್ಮೆ ಬಿಡಿಸುವುದು, ಬಿಡಿ ಕಟ್ಟುವುದು, ಅಗರಬತ್ತಿ ಕಾರ್ಖಾನೆ, ಗ್ಯಾರೇಜ್, ಮಿಠಾಯಿ ಅಂಗಡಿ, ಕೃಷಿ, ಅರಣ್ಯ ಕ್ಷೇತ್ರ ಸೇರಿದಂತೆ ಅಪಾಯಕಾರಿ ಉದ್ಯಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಇದಕ್ಕೆ ಕಾರಣ ಬಡತನ ಹಾಗೂ ಅನಕ್ಷರತೆ. ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕಾಗಿದೆ. ಪಾಲಕರು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಶೋಷಣೆ ಮಾಡದೆ ಶಿಕ್ಷಣ ಹೊರತಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಬಾರದು ಎಂದು ಸಲಹೆ ನೀಡಿದರು.
ಬಾಲ ಕಾಮಿಕ ಪದ್ಧತಿ ನಿರ್ಮೂಲನೆ ಮಾಡಲು ಪಣ ತೊಡಬೇಕು. ಮಕ್ಕಳು ಕೆಲಸದಲ್ಲಿ ತೊಡಗಿದ್ದರೆ ಸಂಬಂಧಪಟ್ಟ ಇಲಾಖೆಯವರೇ ಕ್ರಮ ಕೈಗೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ, ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು ಕಾನೂನಿನ ರೀತಿಯಲ್ಲಿ ಅಪರಾಧ.
ಮಕ್ಕಳನ್ನು ಶಾಲೆಗೆ ಸೇರಿಸಿ ಉತ್ತಮ ಭವಿಷ್ಯಕ್ಕೆ ಅವರಲ್ಲಿ ಸ್ವಾಭಿಮಾನ, ಆತ್ಮಸ್ಥೈರ್ಯ ಉಂಟು ಮಾಡಲು ಪಣ ತೊಡಬೇಕು. ಸರ್ಕಾರದ ಹನ್ನೊಂದು ಇಲಾಖೆ ಹಾಗೂ ಸಂಘ- ಸಂಸ್ಥೆ, ಸಾರ್ವಜನಿಕರ ಸಹಕಾರ ಅವಶ್ಯ ಎಂದು ನುಡಿದರು.
ಇದಕ್ಕೂ ಮುನ್ನ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ, ಸರ್ವಮಂಗಳಾ ಚಿಕ್ಕನಗೌಡ್ರ, ಸುಜಾತಾ ಸುವರ್ಣಾ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಕುಂಟೋಜಿ, ಸೇಂಟ್ ಜಾನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹ್ಯಾರಿಸ್ ವಿಕ್ಟರ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ, ಶಿಕ್ಷಣ ಸಂಯೋಜಕರಾದ ಎ.ಬಿ.ಕಾಳೆ ಹಾಜರಿದ್ದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಜಿ. ಗವಿಸಿದ್ದಪ್ಪ, ಬಿಆರ್‌ಸಿಯ ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ ಕಡ್ಡಾಯ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು.
ಸಿ.ಆರ್.ಸಿಯ ಎಸ್.ಎಸ್.ಗೌಡರ ನಿರೂಪಿಸಿದರು. ನ್ಯಾಯಾಂಗ ಇಲಾಖೆಯ ಬಿ.ಎಂ. ಕುಕನೂರ ಸ್ವಾಗತಿಸಿದರು. ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತು ಪ್ರಮಾಣ ವಚನ ಬೋಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.