ADVERTISEMENT

ಲಕ್ಕುಂಡಿ: ವೀರಭದ್ರೇಶ್ವರ ಗುಗ್ಗಳೋತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:50 IST
Last Updated 7 ಏಪ್ರಿಲ್ 2012, 10:50 IST

ಗದಗ: ವೀರಾವೇಶದಿಂದ ಕುಣಿದಾಡಿದ ಪುರವಂತರು, ಮೈನವಿರಳಿಸುವಂತಹ ವೀರಭದ್ರ ದೇವರ ಒಡುಪುಗಳ ಉದ್ಘಾರ,  ಶಸ್ತ್ರ ಹಾಕಿಸಿಕೊಂಡ ಎಲ್ಲ ವಯೋಮಾನದ ಭಕ್ತ ಸಮೂಹ, ಉರಿ ಬಿಸಿಲಿನಲ್ಲಿಯೇ ಅಗ್ನಿ ಹಾಯ್ದ ಜನಸ್ತೋಮ ಹಾಗೂ ಉತ್ಸುಕತೆ ಮೂಡಿಸಿದ ಯುವಕರ ನಂದಿಕೋಲ ಕುಣಿತದ ದೃಶ್ಯ ನೆರೆದ ಜನರಲ್ಲಿ ಭಕ್ತಿ ಯನ್ನು ಇಮ್ಮಡಿಗೊಳಿಸಿತು. ಇದೆಲ್ಲ ನಡೆದದ್ದು ತಾಲ್ಲೂಕಿನ ಲಕ್ಕುಂಡಿ ಗ್ರಾಮ ದಲ್ಲಿ ಗುರುವಾರ ನಡೆದ ಐತಿಹಾಸಿಕ ಕೋಟೆ ವೀರಭದ್ರೇಶ್ವರ ಗುಗ್ಗಳೋತ್ಸವ ದಲ್ಲಿ.

ಕಳೆದ ಒಂದು ವಾರದಿಂದ  ಕೋಟೆ ವೀರಭದ್ರೇಶ್ವರ ಜಾತ್ರಾ ಕಾರ್ಯಕ್ರಮ ಗಳು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಗುರುವಾರ ಗುಗ್ಗಳ ಮೆರ ವಣಿಗೆ  ಪ್ಯಾಟಿ ಹನುಮಂತದೇವರ ದೇವಸ್ಥಾನದಿಂದ ಆರಂಭಗೊಂಡು ಬಜಾರ್ ರಸ್ತೆಯಲ್ಲಿ ಹೊರಟ ಮೆರ ವಣಿಗೆ ವಿವಿಧ ರಸ್ತೆಗಳಲ್ಲಿ ಮೂಲಕ. ಪಲ್ಲಕ್ಕಿಯಲ್ಲಿ ಇದ್ದ ಮೂರ್ತಿಗೆ ಹಣ್ಣು-ಕಾಯಿ ಸಲ್ಲಿಸಿ ಭಕ್ತಿಯನ್ನು ಸಮರ್ಪಿಸಿದರು. ಶಸ್ತ್ರದ ಮೂಲಕ ಯುವಕರು 108 ಬ್ರಹ್ಮ ಗಂಟುಳ್ಳ ದಾರವನ್ನು ತಮ್ಮ ಗಲ್ಲದ ಮೂಲಕ ಹಾಕಿಸಿಕೊಂಡರು. ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮೆರ ವಣಿಗೆ ಅಂತ್ಯಗೊಂಡು ನೂರಾರು ಭಕ್ತಾದಿಗಳು  ಪವಿತ್ರ ಅಗ್ನಿ ಕುಂಡದಲ್ಲಿ ಹಾಯ್ದು ಭಕ್ತಿಯನ್ನು ಸಮರ್ಪಿಸಿ ದರು. ನಂತರ ಅನ್ನ ಸಂತರ್ಪಣೆ ನಡೆಯಿತು.

ಇದಕ್ಕೂ ಮುನ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ  ಜನಸಾಗರ ಮಧ್ಯೆ ರಥೋತ್ಸವ ಜರುಗಿತು. ಕಾರ್ಯಕ್ರಮ ದಲ್ಲಿ ನಂದಿಕೋಲು, ಜಾಂಜ್‌ಮೇಳ ಸೇರಿದಂತೆ ವಿವಿಧ ವಾದ್ಯ ವೃಂದ ಉತ್ಸವದಲ್ಲಿ ಪಾಲ್ಗೊಂಡಿದ್ದವು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.