ADVERTISEMENT

ಲಿಂಗಾಯತ ಹಿಂದೂ ಧರ್ಮಕ್ಕಿಂತ ಭಿನ್ನ

ಪ್ರತ್ಯೇಕ ಧರ್ಮದ ಸಾಂವಿಧಾನಿಕ ಮಾನ್ಯತೆ ಕುರಿತು ಉಪನ್ಯಾಸ; ತೋಂಟದ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 8:37 IST
Last Updated 12 ಏಪ್ರಿಲ್ 2018, 8:37 IST

ಗದಗ: ‘ಲಿಂಗಾಯತ ಧರ್ಮವು ಹಿಂದೂ ಧರ್ಮದ ಆಚರಣೆಗಳಿಗಿಂತ ಭಿನ್ನವಾಗಿದೆ. ಇದರಿಂದ ಲಿಂಗಾಯತವು ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಎಲ್ಲ ಅವಕಾಶಗಳನ್ನು ಹೊಂದಿದೆ’ ಎಂದು ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘900 ವರ್ಷಗಳ ಹಿಂದೆಯೇ ಸ್ಥಾಪಿತವಾದ ಲಿಂಗಾಯತ ಧರ್ಮ ಕಾಯಕ ಸಿದ್ಧಾಂತದ ಮೇಲೆ ರೂಪುಗೊಂಡಿದೆ. ಎಲ್ಲ ವರ್ಗದ ಜನರನ್ನು ಒಳಗೊಂಡು ವೈದಿಕ ಧರ್ಮದ ಅನೇಕ ವಿಚಾರಗಳನ್ನು,  ತಿರಸ್ಕರಿಸಿ, ಜನಸಾಮಾನ್ಯರು ಧಾರ್ಮಿಕ ಔನ್ನತ್ಯವನ್ನು ಸಾಧಿಸುವ ಹಿನ್ನೆಲೆಯಲ್ಲಿ ಸರಳ ಆಚರಣೆಗಳನ್ನು ಶರಣರು ಜಾರಿಗೆ ತಂದರು’ ಎಂದರು.

‘ದೇಶ ಕಾಲಮಾನಕ್ಕೆ ಅನುಗುಣವಾಗಿ ಸ್ಪಂದಿಸದಿದ್ದರೆ, ಕಾಲ ನಮ್ಮನ್ನು ಕ್ಷಮಿಸುವದಿಲ್ಲ. ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆಯಿಂದ ಮುಂದಿನ ಪೀಳಿಗೆಗೆ ಉಜ್ವಲವಾದ ಭವಿಷ್ಯ ದೊರಕುತ್ತದೆ. ಈ ಕುರಿತು ಜನಸಾಮಾನ್ಯರು ಸೂಕ್ತ ತಿಳಿವಳಿಕೆ ಹೊಂದುವುದು ಅಗತ್ಯವಾಗಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗೆ ಇರುವ ಅಗತ್ಯತೆ’ ಕುರಿತು ಅಣ್ಣಿಗೇರಿಯ ನಿಂಗಮ್ಮ ಹೂಗಾರ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಹರ್ಲಾಪುರ ಅವರು ಉಪನ್ಯಾಸ ನೀಡಿದರು.

‘ಲಿಂಗಾಯತರು ಹಿಂದೂಗಳಲ್ಲ. ಲಿಂಗಾಯತ ದುಡಿಯುವ ವರ್ಗದ ಜನರ ಧರ್ಮವಾಗಿದೆ. ಕಾಯಕ, ದಾಸೋಹಕ್ಕೆ ಪ್ರಾಧಾನ್ಯ ನೀಡಿ ವ್ಯಕ್ತಿಗತ ಬೆಳವಣಿಗೆಯ ಜತೆಗೆ ಸಮಾಜದ ಉನ್ನತಿಗೂ ಶರಣರು ಶ್ರಮಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆಯಿಂದ ವೀರಶೈವರಿಗೆ ಆಗುವ ತೊಂದರೆ ಏನು ಎಂಬುದನ್ನು ವೀರಶೈವ ಮಠಾಧೀಶರ ಸ್ಪಷ್ಟಪಡಿಸಬೇಕು. ಲಿಂಗಾಯತರು ಜಾತಿ, ಲಿಂಗ ತಾರತಮ್ಯಗಳಿಂದ ಮುಕ್ತವಾದ ಮನಸ್ಸನ್ನು ಹೊಂದಿ ಬಹುದೇವೋಪಾಸನೆಯಿಂದ ಮುಕ್ತರಾಗಬೇಕು’ ಎಂದು ಅವರು ಹೇಳಿದರು.

ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಸಾವಿರ ಹಾಡುಗಳ ಸರದಾರ ಹುಕ್ಕೇರಿ ಬಾಳಪ್ಪನವರ ಪುಸ್ತಕವನ್ನು ಜಿ.ಪಿ.ಕಟ್ಟಿಮನಿ ಪರಿಚಯಿಸಿದರು. ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರೊ. ಎಸ್.ಯು. ಸಜ್ಜನ ಶೆಟ್ಟರ, ಸಂಘದ ಅಧ್ಯಕ್ಷ ಶೇಖಣ್ಣ ಕವಳಿ ಕಾಯಿ, ಅನ್ನಪೂರ್ಣಕ್ಕ ಬಡಿಗಣ್ಣವರ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ವಿದ್ಯಾಶ್ರೀ ಮುಳ್ಳೂರ, ಸುವರ್ಣ ಮುಟಗಿ, ಚಂದ್ರಶೇಖರ ಹಿರೇಮಠ, ಅನ್ನಪೂರ್ಣ ಗೋಲಪ್ಪನವರ, ಅಲ್ಲಮಪ್ರಭು ಗೋಲಪ್ಪನವರ ಇದ್ದರು.

**

ಬ್ರಿಟಿಷರ ಕಾಲದಿಂದಲೂ ಅನೇಕ ವರದಿಗಳು ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಎಂಬುದನ್ನು ಖಚಿತಪಡಿಸುತ್ತವೆ – ಎಸ್‌.ಎಸ್. ಹರ್ಲಾಪುರ, ಪ್ರಾಚಾರ್ಯ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.