ಬೆಂಗಳೂರು: ಬಸ್ ಪ್ರಯಾಣಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಆಂತರಿಕ ಆಡಳಿತದಲ್ಲಿ ಪರಿಣಾಮಕಾರಿ ಸಂವಹನ ವ್ಯವಸ್ಥೆ, ಪಾರದರ್ಶಕತೆ ಹೆಚ್ಚಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ)ಯು ತಂತ್ರಾಂಶದ ಸೌಲಭ್ಯಗಳನ್ನು ಬಳಸಿ `ಇ-ಸ್ಮಾರ್ಟ್ (ಸಹಾಯಹಸ್ತ)' ಯೋಜನೆ ಅನುಷ್ಠಾನಗೊಳಿಸಿದೆ.
ನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಯೋಜನೆಗೆ ಚಾಲನೆ ನೀಡಿದರು. `ಈ ಯೋಜನೆ ತ್ವರಿತ, ಸರಳ ಹಾಗೂ ಪಾರದರ್ಶಕ ಸೇವೆಗೆ ನಾಂದಿ' ಎಂದು ಅವರು ಬಣ್ಣಿಸಿದರು.
`ಬಸ್ ಮಾರ್ಗಗಳು, ಬಸ್ ವೇಳಾಪಟ್ಟಿ, ಸೀಟು ಲಭ್ಯತೆ ಮತ್ತಿತರ ವಿಷಯ ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದೆ. ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ದೂರು ದಾಖಲಿಸು ವಲ್ಲಿಯೂ ವಿಳಂಬವಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ತಂತ್ರಜ್ಞಾನದ ನೆರವು ಪಡೆಯಲಾಗಿದೆ. ಈ ಯೋಜನೆಯಲ್ಲಿ 11 ಉಪ ಯೋಜ ನೆಗಳಿವೆ' ಎಂದು ವಾಯವ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್ ತಿಳಿಸಿದರು.
`ಪ್ರಯಾಣಿಕರು ಬಸ್ ವೇಳಾಪಟ್ಟಿ, ಆಸನಗಳ ಲಭ್ಯತೆ, ಕುಂದುಕೊರತೆಗಳ ಬಗ್ಗೆ ದೂರು ದಾಖಲು, ಬಸ್ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ, ಎಲ್ಲಾ ಅಧಿಕಾರಿಗಳ ದೂರವಾಣಿ ಮತ್ತು ಸಂಸ್ಥೆಯ ಕುರಿತು ಹಲವಾರು ಮಾಹಿತಿ ಗಳನ್ನು ಉಚಿತವಾಗಿ ಆನ್‌ಲೈನ್ ಅಥವಾ ದೂರವಾಣಿ ಮೂಲಕ ಪ್ರಯಾ ಣಿಕರು ಪಡೆಯಬಹುದು. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ ತಂತ್ರಾಂಶ ಗಳನ್ನು ಸಿದ್ಧಪಡಿಸಲಾಗಿದೆ. ಸಹಾಯ ವಾಣಿಯ ಸಂಖ್ಯೆ 1800-425- 1836' ಎಂದು ವಿವರ ನೀಡಿದರು.
`ಸಂಸ್ಥೆಯ 48 ಘಟಕಗಳಲ್ಲಿ ಬಸ್ ಕಾರ್ಯಾಚರಣೆ, ವರಮಾನ ಸಂಗ್ರಹ ಹಾಗೂ ಮಾರ್ಗ ರದ್ದತಿಗಳ ಪೂರ್ಣ ಮಾಹಿತಿಯನ್ನು ಆನ್‌ಲೈನ್ ಮೂಲಕ ಪಡೆದು ಸಾರಿಗೆ ವ್ಯವಸ್ಥೆ ನಿಯಂತ್ರಿಸಲು ಸಾಧ್ಯವಾಗಲಿದೆ. ಸಂಸ್ಥೆಯ ವಾಹನಗಳು ಅಪಘಾತಕ್ಕೀಡಾದಾಗ ಮತ್ತು ಅವಘಡಗಳು ಸಂಭವಿಸಿದಾಗ ತುರ್ತಾಗಿ ಮಾಹಿತಿ ನೀಡಲು, ಈ ಕುರಿತು ಸಾಕ್ಷಿ ಮತ್ತು ದಾಖಲಾತಿ ಕಾಪಾಡಲು ಆನ್‌ಲೈನ್ ಅವಘಡ ಮೇಲ್ವಿಚಾರಣಾ ವ್ಯವಸ್ಥೆಯಿಂದ ಸಾಧ್ಯವಾಗಲಿದೆ' ಎಂದು ಅವರು ಹೇಳಿದರು.
`ಸುಲಭವಾಗಿ ಬಸ್ ಪಾಸ್ ಪಡೆಯಲು ಮತ್ತು ಪ್ರಯಾಣಿಕರ ಅವಶ್ಯಕತೆ ಅನುಸಾರ ಕಾರ್ಯಾಚರಣೆ ರೂಪಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ಆಧಾರಿತ ಬಸ್ ಪಾಸ್ ವ್ಯವಸ್ಥೆ ಆರಂಭಿಸಲಾಗುತ್ತಿದೆ. ಈ ವ್ಯವಸ್ಥೆ ಜುಲೈ 15ರಿಂದ ಜಾರಿಗೆ ಬರಲಿದೆ' ಎಂದರು.
`ಸಂಸ್ಥೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಮತ್ತು ನೈಜ ಪ್ರಗತಿ ಅನುಸಾರ ಬಿಲ್ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಆನ್‌ಲೈನ್ ಕಾಮಗಾರಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.