ADVERTISEMENT

ವೀರಶೈವ ಸಾಹಿತ್ಯಕ್ಕೆ ನಿಜಗುಣರ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 8:20 IST
Last Updated 21 ಮಾರ್ಚ್ 2011, 8:20 IST

ಲಕ್ಷ್ಮೇಶ್ವರ: ‘ನಿಜಗುಣ ಶಿವಯೋಗಿ ಗಳು ವೀರಶೈವ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕೈವಲ್ಯ ಪದ್ಧತಿ, ಅನುಭಾವಸಾರ, ವಿವೇಕ ಚಿಂತಾಮಣಿ ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಉನ್ನತ ಸ್ಥಾನ ಪಡೆದುಕೊಂಡಿವೆ’ ಎಂದು  ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ರಾಜೇಂದ್ರ ಗಡಾದ ಹೇಳಿದರು. ಪಟ್ಟಣದ ಸೋಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ನಿಜಗುಣ ಶಿವಯೋಗಿಗಳು ಎಂಬ ವಿಯದ ಕುರಿತು ಉಪನ್ಯಾಸ ನೀಡಿದರು.

ದಾಸವರೇಣ್ಯ ಪುರಂದರದಾಸರ ಕುರಿತು ಸಾಹಿತಿ ನಾಗರಾಜ ಕುಲಕರ್ಣಿ ಉಪನ್ಯಾಸ ನೀಡಿ, ‘ಸಮಾಜದಲ್ಲಿನ ಅಂಕುಡೊಂಕುಗಳನ್ನು 15ನೇ ಶತಮಾನದಲ್ಲಿಯೇ ಪುರಂದರದಾಸರು ಕಟುವಾಗಿ ಟೀಕಿಸಿದರು. ಅವರು ರಚಿಸಿರುವ ಹರಿ ಕೀರ್ತನೆಗಳೂ ಇಂದಿಗೂ ನಮಗೆ ಜೀವನದ ದಾರಿ ತೋರುವ ದೀಪಗಳಾಗಿವೆ’ ಎಂದರು.

ಜೆ.ಎಸ್. ರಾಮಶೆಟ್ರ ಭಕ್ತಶ್ರೇಷ್ಠ ಕನಕದಾಸರ ಕುರಿತು ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಫಕೀರೇಶ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಸತೀಶ ನಾರಾಯಣಕರ, ಬಿ.ಎಸ್. ಬಾಳೇಶ್ವರಮಠ, ಶಾಂತಯ್ಯನವರು ಶಿಗ್ಲಿಮಠ, ಅಶೋಕ ಸೊರಟೂರ ಮತ್ತಿತರರು ಹಾಜರಿದ್ದರು. ಆರ್.ಜೆ. ಬೂದಿಹಾಳ ಸ್ವಾಗತಿಸಿದರು. ಡಾ.ಎಸ್.ವಿ. ತಮ್ಮನಗೌಡ್ರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.