ADVERTISEMENT

ಶಾಸಕ ಸಂಭಾಜಿ ಪಾಟೀಲ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:46 IST
Last Updated 2 ಡಿಸೆಂಬರ್ 2013, 7:46 IST

ಗಜೇಂದ್ರಗಡ: ಕರ್ನಾಟಕದ ಬಗ್ಗೆ ಹಗುರವಾಗಿ ಮಾತನಾಡಿದ ಎಂ.ಇ.ಎಸ್‌.ಶಾಸಕ ಸಂಭಾಜಿ ಪಾಟೀಲ್‌ ಅವರ ಶಾಸಕತ್ವವನ್ನು ಕೂಡಲೇ ರದ್ದು­ಗೊಳಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾಗಿರುವ ಧಕ್ಕೆಯನ್ನು ತಡೆಗಟ್ಟಬೇಕು ಎಂದು ಕರ್ನಾಟಕ ಜನಪರ ಸೇವಾ ಸಮಿತಿ ಸದಸ್ಯರು ವಿಶೇಷ ತಹಶೀ­ಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

‘ಎಂಇಎಸ್‌ನ ನಾಲ್ವರು ಶಾಸಕರು ಇದ್ದಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೇವು’ ಎಂಬ ಶಾಸಕ ಸಂಭಾಜಿ ಪಾಟೀಲ್‌ ರ ಉದ್ಧಟತನದ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. ಶಾಸಕ ಇಂತಹ ಹೀನ ಟೀಕೆಗಳನ್ನು ಕೇಳಿಯೂ ಸರ್ಕಾರ ಮೌನ ವಹಿಸಿರುವುದು ನಾಚಿಗೇಡಿನ ಸಂಗತಿ ಎಂದು ಸಮಿತಿ ಸದಸ್ಯರು ಕಿಡಿಕಾರಿದರು.

ಶಾಸಕ ಸಂಭಾಜಿ ಪಾಟೀಲರಂತಹ ಹಲವು ಎಂಇಎಸ್‌ ಮುಖಂಡರುಗಳು ಒಂದಿಲ್ಲೊಂದು ಕಾರಣದಿಂದ ಕನ್ನಗರಿಗೆ ಅವಮಾನ ಮಾಡುತ್ತಲೆ ಇದ್ದಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಸಂಭಾಜಿ ಪಾಟೀಲರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಹಲವು ವರ್ಷಗಳಿಂದ ವಿನಾಕಾರಣ ಕನ್ನಡಿಗರನ್ನು ಕೆಣಕುತ್ತಿರುವ ಸಂಭಾಜಿ ಪಾಟೀಲರಂತಹ ಕನ್ನಡ ದ್ರೋಹಿಗಳನ್ನು ಗಡಿಪಾರು ಮಾಡಬೇಕು. ಹಲವಾರು ಸಂದರ್ಭಗಳಲ್ಲಿ ಸಂಭಾಜಿ ಪಾಟೀಲರಂತವರು ಕನ್ನಡ ನೆಲ–ಜಲ, ಗಡಿ ವಿಷಯಗಳಿಗೆ ಸಂಬಂಧಿಸಿದಂತೆ ಕೀಳಾಗಿ ಮಾತನಾಡುತ್ತಿದ್ದರೂ ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸರ್ಕಾರಗಳ ಹೇಡಿತನವನ್ನು ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ತಹಶೀಲ್ದಾರ ಸಿ.ಎಂ.ಕಲಹಾಳ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಗಪ್ಪ ಯಲಬುಣಚಿ, ಕಳಕಪ್ಪ ಹಡಪದ, ಬಾಬು ಗೋಡೆಕಾರ್‌, ಗಣೇಶ ಗುಗಲೋತ್ತರ, ಶ್ರೀಕಾಂತ ಕಮ್ಮಾರ, ಅಂದಪ್ಪ ರಾಠೋಡ್‌, ಮಂಜು ಚವ್ಹಾಣ, ಕಾಶಿ ಗುಗಲೋತ್ತರ, ಗುರುರಾಜ ಸಂಗನಾಳ, ಕಿರಣ ರಾಠೋಡ್‌, ಕೃಷ್ಣಾ ರಾಠೋಡ್‌, ಮಲ್ಲಿಕಾರ್ಜುನ ಅಂಗಡಿ, ಮಹ್ಮದಗೌಸ್‌ ಮುಲ್ಲಾ, ಬೀಬಿಜಾನ್‌ ಮುಜಾವರ್‌, ನಂದಾ ಮನೇರಾಳ್‌, ಆಶಾ ಹುಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.