ADVERTISEMENT

ಶೇಂಗಾ ಬೆಳೆಗೆ ‘ಸುರಳಿ ಪುಚಿ’ ರೋಗ ಬಾಧೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 5:28 IST
Last Updated 9 ಡಿಸೆಂಬರ್ 2013, 5:28 IST

ಗಜೇಂದ್ರಗಡ: ಮಸಾರಿ ಪ್ರದೇಶದ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಬೇಸಿಗೆ ಶೇಂಗಾ ಬೆಳೆಗೆ ‘ಸುರಳಿ ಪುಚಿ’ ಕೀಟಬಾಧೆ ವ್ಯಾಪಕವಾಗಿದೆ. ಕೀಟಬಾಧೆಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಕೃಷಿಕ ಸಮೂಹ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. ಪರಿಣಾಮ ಶೇಂಗಾ ಬೆಳೆದ ತಪ್ಪಿಗಾಗಿ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ವಿಭಿನ್ನ ಸಾಗುವಳಿ ಭೂ ಪ್ರದೇಶ ಹೊಂದಿರುವ ರೋಣ ತಾಲ್ಲೂಕಿನಲ್ಲಿ ಎರಿ (ಕಪ್ಪು ಮಣ್ಣಿನ ಪ್ರದೇಶ) ಹಾಗೂ ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶ ಎಂಬ ವಿಶಿಷ್ಟ ಸಾಗುವಳಿ ಕೃಷಿ ಕ್ಷೇತ್ರಗಳಿವೆ. ಈ ಎರಡು ಪ್ರದೇಶಗಳಲ್ಲಿಯೂ ವಿಭಿನ್ನ ಕೃಷಿ ಪದ್ಧತಿಗಳು ಜಾರಿಯಲ್ಲಿವೆ. ಅಲ್ಲದೆ, ವಿಶಿಷ್ಟ ಬೆಳೆಗಳನ್ನು ಬೆಳೆಯಲಾಗುತ್ತದೆ.

ಶೇಂಗಾ ಬಿತ್ತನೆ ಮಾಡಿದ ಇಪ್ಪತ್ತನೇ ದಿನಕ್ಕೆ ಶೇಂಗಾ ಎಲೆಯ ಮೇಲೆ ಪಾತರಗಿತ್ತಿ ರೂಪದ ಚಿಕ್ಕ ಕೀಟ ಉತ್ಪತ್ತಿಯಾಗುತ್ತದೆ. ಬಳಿಕ ಎಲೆಯ ಮೇಲೆ ಕಪ್ಪು ಬಣ್ಣದ ಚಿಕ್ಕ–ಚಿಕ್ಕ ತತ್ತಿಗಳನ್ನಿಡುತ್ತದೆ. ಈ ತತ್ತಿ ಮರಿಯಾದ ಮೇಲೆ ಶೇಂಗಾ ಎಲೆಯನ್ನು ಸುತ್ತಿ­­ಕೊಂಡು ಎಲೆಯಲ್ಲಿನ ಸತ್ವವನ್ನು ಪೂರ್ಣ ಪ್ರಮಾಣದಲ್ಲಿ ಹೀರುತ್ತದೆ. ಈ ಕೀಟ­ಬಾಧೆಗೆ ‘ಸುರಳಿ ಪುಚಿ’ ಕೀಟಬಾಧೆ ಎನ್ನಲಾಗುತ್ತದೆ.

‘ಸುರಳಿ ಪುಚಿ’ ಕೀಟಬಾಧೆ ನಿಯಂತ್ರಣಕ್ಕೆ ಬಾರದಿದ್ದರೆ ಶೇ.50 ಶೇಂಗಾ ಬೆಳೆಯ ಇಳುವರಿಗೆ ಧಕ್ಕೆ ಕಟ್ಟಿಟ್ಟ ಬುತ್ತಿ. ಈ ಕೀಟ ಬೆಳೆಯ ಎಲೆಯಲ್ಲಿನ ಸತ್ವವನ್ನು ಹೀರಿಕೊಳ್ಳುವುದರಿಂದ ಬೇರುಗಳು ಸತ್ವ ಕಳೆದುಕೊಳ್ಳುತ್ತವೆ. ಬೇರುಗಳು ಸತ್ವ ಕಳೆದು­ಕೊಂಡರೆ ಬೇರುಗಳಲ್ಲಿ ಉತ್ಪತ್ತಿಯಾಗಬೇಕಿದ್ದ ಶೇಂಗಾ ಕಾಯಿಗಳು ಬೆಳವಣಿಗೆಯಾಗುವುದಿಲ್ಲ. ಶೇಂಗಾ ಕಾಯಿಗಳು ಉತ್ಪತ್ತಿಯಾಗದಿದ್ದರೆ ಬೆಳೆ­ಯಿಂದ ಲಾಭವಿರಲಿ, ಖರ್ಚೂ ಸಹ ಕೈಸೇರುವುದಿಲ್ಲ.

ಕಾಲಕಾಲೇಶ್ವರ, ಗಜೇಂದ್ರಗಡ, ಗೋಗೇರಿ, ರಾಮಾಪುರ, ಪುರ್ತಗೇರಿ, ವೀರಾಪೂರ, ಕೊಡ­ಗಾನೂರ, ಜಿಗೇರಿ, ಕುಂಟೋಜಿ, ಬೆನಸಮಟ್ಟಿ, ನಾಗರಸಕೊಪ್ಪ, ವದೇಗೋಳ, ಮ್ಯಾಕಲ್‌­ಝರಿ, ಮಾಟರಂಗಿ ಮುಂತಾದ ಮಸಾರಿ ಪ್ರದೇಶದಲ್ಲಿ ಪ್ರಸಕ್ತ ವರ್ಷ 2,650 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾದ ಬೇಸಿಗೆ ಶೇಂಗಾ ಬೆಳೆಗೆ ಸುರಳಿ ಪುಚಿ ಕೀಟಬಾಧೆ ಮರ್ಮಾಘಾತವನ್ನುಂಟು ಮಾಡಿದೆ.

ಕೀಟಬಾಧೆಯಿಂದ ಬೆಳೆ ಸಂರಕ್ಷಿಸಿಕೊಳ್ಳುವು­ದಕ್ಕಾಗಿ ಬೆಳೆಗಾರರು ಕ್ವಿನಾಲ್‌ಫಾಸ್‌, ಎಂಡೋಸ­ಲ್ಫಾನ್‌ ಮುಂತಾದ ಕೀಟನಾಶಕಗಳನ್ನು ಸಿಂಪಡಿಸಿದರೂ ಕೀಟಬಾಧೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಪರಿಣಾಮ ಕಳೆದ ಮೂರು ವರ್ಷಗಳ ಭೀಕರ ಬರದಿಂದ ಉಂಟಾಗಿದ್ದ ನಷ್ಟವನ್ನು ನೀಗಿಸಿಕೊಳ್ಳುವ ತವಕದಲ್ಲಿ ಬೆಳೆಯಲಾಗಿದ್ದ ಬೇಸಿಗೆ ಶೇಂಗಾ ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸುವ ಸಾಧ್ಯತೆ­ಗಳೇ ಹೆಚ್ಚಿವೆ ಎನ್ನುತ್ತಾರೆ ರೈತ ಅಂದಪ್ಪ ಅಂಗಡಿ.  

‘ಸುರಳಿ ಪುಚಿ ಕೀಟಬಾಧೆಗೆ ಶೇಂಗಾ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಖಾಸಗಿ ಅಗ್ರೋ ಕೇಂದ್ರಗಳ ಸಲಹೆ ಮೇರೆಗೆ ಬೆಳೆಗಾರರು ಅವೈಜ್ಞಾನಿಕ ಕ್ರಿಮಿನಾಶಕಗಳನ್ನು ಸಿಂಪಡಿಸದೆ, ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ನೀಡುವ ಕ್ಲೋರ­ೋ­ಪೈರಿಫಾಸ್‌, ಕ್ವಿನಾಲ್‌ ಫಾಸ್‌ ರಾಸಾಯನಿಗಳನ್ನು ಸಿಂಪಡಿಸಿದರೆ ಕೀಟಬಾಧೆ ನಿಯಂ­ತ್ರಣಕ್ಕೆ ಬರುತ್ತದೆ’ ಎಂದು ರೋಣ  ಸಹಾ­ಯಕ ಕೃಷಿ ನಿರ್ದೇಶಕ ಎಸ್‌.ಎ.ಸೂಡಿಶೆಟ್ಟರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.