ADVERTISEMENT

ಶೇ 22ರಷ್ಟು ಮಾತ್ರ ಮುಂಗಾರು ಬಿತ್ತನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 7:15 IST
Last Updated 5 ಜುಲೈ 2017, 7:15 IST
ಶೇ 22ರಷ್ಟು ಮಾತ್ರ ಮುಂಗಾರು ಬಿತ್ತನೆ
ಶೇ 22ರಷ್ಟು ಮಾತ್ರ ಮುಂಗಾರು ಬಿತ್ತನೆ   

ಗದಗ: ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ  ಕೇವಲ ಶೇ 22.7 ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯ 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಇದರಲ್ಲಿ ಇದುವರೆಗೆ ಕೇವಲ 54,477 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, 24,534 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಹೆಸರು ಬಿತ್ತನೆ ಅವಧಿ ಈಗಾಗಲೇ ಮುಗಿದಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಪತ್ರಿಕೆಗೆ ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಹಂಗಾಮಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಮಳೆಯಾಗುವ ಮನ್ಸೂಚನೆಗಳೂ ಕಾಣಿಸುತ್ತಿಲ್ಲ. ಗಾಳಿ ವೇಗ ಹೆಚ್ಚಿರುವುದರಿಂದ ಮೋಡಗಳು ಚದುರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು ಅದರಲ್ಲಿ ಸಂಗ್ರಹವಾದ ನೀರನ್ನು ಬಳಸಿಕೊಳ್ಳತ್ತಿದ್ದಾರೆ’ಎಂದರು.

ADVERTISEMENT

ಮುಂಗಾರಿನ ಮುಂದಿನ ಬೆಳೆಗಳಾದ ಈರುಳ್ಳಿ ಮತ್ತು ಮೆಣಸಿನಕಾಯಿಗೂ ಮಳೆ ಕೊರತೆ ಕಾಡುತ್ತಿದೆ. ಮಳೆಯಾದರೆ ಮಾತ್ರ ಮುಂಗಾರು ಹಂಗಾಮು ರೈತರ ಕೈಹಿಡಿಯಲಿದೆ’ ಎಂದು ಅವರು ಹೇಳಿದರು. ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯಕ್ಕೆ ಶೇ 63.2 ರಷ್ಟು ಬಿತ್ತನೆಯಾಗಿತ್ತು.

ಈ ವರ್ಷ ಇದುವರೆಗೆ ಜಿಲ್ಲೆಯಲ್ಲಿ 7,279 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 25,178 ಹೆಕ್ಟೇರ್‌ನಲ್ಲಿ     ದ್ವಿದಳ ಧಾನ್ಯ, 10,711 ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಬೆಳೆ ಬಿತ್ತನೆಯಾಗಿದೆ. ವಾಡಿಕೆ ಪ್ರಮಾಣಕ್ಕೆ ಹೋಲಿಸಿದರೆ ಈ ಮುಂಗಾರಿನಲ್ಲಿ ಇದುವರೆಗೆ 81 ಮಿಮೀ ಮಳೆ ಕೊರತೆಯಾಗಿದೆ. ಜೂನ್‌ನಲ್ಲಿ ಕೇವಲ 116 ಮಿಮೀ ಮಾತ್ರ ಮಳೆ ಮಾತ್ರ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 184.2 ಮಿಮೀ ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.