ADVERTISEMENT

‘ಸಮಸ್ಯೆಗೆ ಸ್ಪಂದಿಸದಿದ್ದರೆ ಅಧಿಕಾರವನ್ನು ತ್ಯಜಿಸಿ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:30 IST
Last Updated 4 ಅಕ್ಟೋಬರ್ 2017, 6:30 IST

ನರಗುಂದ: ‘ಮಹದಾಯಿ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು ಅಧಿ ಕಾರ ತ್ಯಜಿಸಬೇಕು. ನೀರು ಕೊಡಲು ಆಗದಿದ್ದರೆ ಈ ಭಾಗದ ಸಂಸದರು, ಶಾಸಕರು ರಾಜೀನಾಮೆ ನೀಡಿ ರೈತರ ಜತೆಗೆ ಹೋರಾಟದಲ್ಲಿ ಭಾಗ ವಹಿಸಬೇಕು’ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆದ ಮಹಾದಾಯಿ ಧರಣಿಯ 811ನೇ ದಿನ ಮಂಗಳವಾರ ಅವರು ಮಾತನಾಡಿದರು.

‘ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡುವ ರಾಜಕಾರಣಿಗಳು ಅದಕ್ಕೆ ನೀರಿನ ಮೂಲ ಎಲ್ಲಿದೆ ಎನ್ನುವ ಕುರಿತು ಚಿಂತನೆ ಮಾಡುವುದಿಲ್ಲ. ಒಂದಿಷ್ಟು ಅನುದಾನ ಖರ್ಚು ಮಾಡಿ ಕಾಮಗಾರಿ ಮುಗಿಸಿದರೆ ಸಾಕು ಎಂಬ ಅವರ ಧೋರಣೆ ಸಲ್ಲದು. ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಯಾರಿಗೂ ಕಾಳಜಿ ಇಲ್ಲ’ ಎಂದರು.

‘ನಮ್ಮ ಪಾಲಿನ ನೀರಿನ ಹಕ್ಕನ್ನು ಮಾತ್ರ ನಾವು ಕೇಳುತ್ತಿದ್ದೇವೆ. ಅದನ್ನು ಒದಗಿಸಬೇಕಾದದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ.

ADVERTISEMENT

ಆದ್ದರಿಂದ ವಾಸ್ತವ ಪರಿಸ್ಥತಿ ಗಮನಿಸಿ, ನಮ್ಮ ಹೋರಾಟ ಗಮನದಲ್ಲಿಟ್ಟುಕೊಂಡು ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರ ನ್ಯಾಯಮಂಡಳಿ ಜತೆ ಸಹಕರಿಸಬೇಕು’ ಎಂದು ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಹೇಳಿದರು. ಚಂದ್ರಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ, ಶ್ರೀಶೈಲ ಮೇಟಿ, ಎಸ್‌.ಕೆ.ಗಿರಿಯಣ್ಣವರ, ವೀರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.