ಗಜೇಂದ್ರಗಡ: ಗಂಡು ಹೆಣ್ಣು ಎಂಬ ಭೇದ-ಭಾವ ಮಾಡದೆ ಮಕ್ಕಳಿಗೆ ಸಮಾನ ಶಿಕ್ಷಣ ನೀಡಲು ಪಾಲಕರು ಶ್ರಮಿಸಬೇಕು. ಆಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸಂಯುಕ್ತಾ ಬಂಡಿ ಹೇಳಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-4 ರಲ್ಲಿ ಏರ್ಪಡಿಸಿದ್ದ ಗಣಕಯಂತ್ರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲ ಪಾಲಕರು ಗಂಡು ಮಕ್ಕಳಿಗೆ ನೀಡುವ ಶಿಕ್ಷಣವನ್ನು ಹೆಣ್ಣು ಮಕ್ಕಳಿಗೆ ನೀಡುತ್ತಿಲ್ಲ. ಪರಿಣಾಮ ಮಹಿಳೆ ಸ್ವಾವಲಂಬಿ ಬದುಕು ಸಾಗಿಸುವಲ್ಲಿ ವಿಫಲವಾಗುತ್ತಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರ ಪ್ರದೇಶಗಳಲ್ಲಿನ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ವಿಷಯದಲ್ಲಿ ಗಂಡು-ಹೆಣ್ಣು ಎಂಬ ಭೇದ ಎನಿಸುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ತಾರತಮ್ಯ ಮಾಡಲಾಗುತ್ತಿದೆ ಎಂದರು.
ಇದರಿಂದ ಮಕ್ಕಳ ಭವಿಷ್ಯ ಡೊಲಾಯಮಾನ ಸ್ಥಿತಿ ತಲುಪುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಪಾಲಕರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಓದಿನ ಬಗ್ಗೆ ಪಾಲಕರು ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ರೀತಿಯಲ್ಲಿ ಓದುವ ಮೂಲಕ ಪಾಲಕರ ಕನಸು ಸಾಕಾರಗೊಳಿಸಬೇಕು. ಓದಿನ ಅಮೂಲ್ಯ ದಿನಗಳಲ್ಲಿ ಮೋಜು-ಮಸ್ತಿಗಳತ್ತ ಹೆಚ್ಚು ಆಕರ್ಷಿತರಾಗಿ ಓದಿನ ಕಡೆ ನಿರ್ಲಕ್ಷ್ಯ ಮನೋಭಾವನೆ ತಾಳಿ ಉಜ್ವಲ ಭವಿಷ್ಯವನ್ನು ವಿಕಾರಗೊಳಿಸಿಕೊಳ್ಳುವ ಬದಲು ಸಾಕಾರಗೊಳಿಸಿಕೊಳ್ಳಲು ಶ್ರಮಿಸಿ ಎಂದು ಕಿವಿಮಾತು ಹೇಳಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಭು ಚವಡಿ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಜವಾಬ್ದಾರಿಗಿಂತಲ್ಲೂ ಸಮಾಜದ ಜವಾಬ್ದಾರಿ ಹೆಚ್ಚಿದೆ ಎಂದರು.
ಪಾಲಕರು ಶೇ. 12 ರಷ್ಟು ಮಕ್ಕಳ ಭವಿಷ್ಯ ನಿರ್ಮಾಣದ ಹೊಣೆ ಹೊತ್ತರೆ, ಸಮಾಜ ಶೇ.82 ರಷ್ಟು ಮಹತ್ವದ ಜವಾಬ್ದಾರಿಯನ್ನು ಹೊಂದಿದೆ.
ಈ ದಿಸೆಯಲ್ಲಿ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನಮಾನ ಹೊಂದಿದಾಗ, ಸಮಾಜದಲ್ಲಿನ ಅಸಹಾಯಕರ ಹಾಗೂ ನೊಂದವರ ಕಣ್ಣೀರು ಒರೆಸುವ ಮೂಲಕ ಸಮಾಜದ ಖುಣ ತೀರಿಸಲು ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ದೇವಕ್ಕ ಬೆಳವಣಿಕಿ, ಉಪಾಧ್ಯಕ್ಷ ಭಾಸ್ಕರ ರಾಯ ಬಾಗಿ, ಪುರಸಭೆಯ ಹಿರಿಯ ಸದಸ್ಯ ತಿಮ್ಮಣ್ಣ ವನ್ನಾಲ, ಸದಸ್ಯರಾದ ರೇಖಾ ರಂಗ್ರೇಜಿ, ಅಕ್ಕಮ್ಮ ರಾಮಜಿ, ಸಾವಿತ್ರಿ ಬಾಯಿ ನಿಂಬಾಳ್ಕರ, ಪರಪ್ಪ ಸಂಕನೂರ ಉಪಸ್ಥಿರಿದ್ದರು.
ಆಟ-ಪಾಠ ಸಮನಾಗಿರಲಿ
ಗದಗ: ವಿದ್ಯಾರ್ಥಿಗಳು ಆಟದ ಜೊತೆಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಡಾ. ಆರ್.ಎಲ್. ಹಂಸನೂರ ಸಲಹೆ ನೀಡಿದರು.ಸ್ಥಳೀಯ ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಡಿ.ಜಿ. ಮೇಲ್ಮಾಳಗಿ ಸಂಸ್ಕೃತ ಪಾಠಶಾಲೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕ್ರೀಡಾಕೂಟ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಯಾರೂ ಹೆಚ್ಚು ಶ್ರಮ ವಹಿಸಿ ಅಧ್ಯಯನ ಮಾಡುತ್ತಾರೋ ಅವರು ಸಾಧನೆ ಮಾಡುತ್ತಾರೆ. ಅವರೇ ಸಿದ್ಧಿ ಪಡೆಯುತ್ತಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಎನ್. ಭಟ್ ಮಾತನಾಡಿ, ಮಠ ಮಾನ್ಯಗಳು ಎಲ್ಲ ಜನಾಂಗಕ್ಕೂ ಸಂಸ್ಕೃತ ಭಾಷೆ ಬೋಧನೆಗೆ ಅನುವು ಮಾಡಿ ಕೊಟ್ಟಿವೆ.
ಈ ಭಾಷೆಯನ್ನು ಉಳಿಸಿ ಕೊಂಡು ಬಂದಿದೆ. ಆಸಕ್ತಿಯಿಂದ ಓದಿ ಉತ್ತಮ ಸಂಸ್ಕಾರ ಪಡೆದುಕೊಳ್ಳ ಬೇಕು ಎಂದರು.ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪದವಿ ಪಡೆದ ಡಾ. ರಾಮಚಂದ್ರ ಹಂಸನೂರ ಅವರನ್ನು ಸನ್ಮಾನಿಸ ಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.