ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಹೆಬ್ಬಾಳ ಗ್ರಾಮ ಸಜ್ಜು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 7:02 IST
Last Updated 17 ಫೆಬ್ರುವರಿ 2014, 7:02 IST
ಶಿರಹಟ್ಟಿ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆಯುತ್ತಿರುವ ಮೂರನೇ ತಾಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ
ಶಿರಹಟ್ಟಿ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆಯುತ್ತಿರುವ ಮೂರನೇ ತಾಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ   

ಶಿರಹಟ್ಟಿ: ತಾಲ್ಲೂಕಿನ ಕೊನೆಯ ಗ್ರಾಮ ಪಂಚಾಯ್ತಿ ಹೆಬ್ಬಾಳದಲ್ಲಿ  ಇದೇ 19ರಂದು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಾಹಿತ್ಯಪ್ರಿಯರಿಗೆ ರಸದೌತಣ ನೀಡಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದ್ದು ವೀರಭದ್ರೇಶ್ವರ, ಹಾಲಸ್ವಾಮಿ, ಶಿವಯೋಗಿಶ್ವರ, ರಾಮಲಿಂಗ ಮತ್ತು ಸೋಮಲಿಂಗ, ಮೌನೇಶ್ವರ ಮತ್ತು ಸಂಗಮೇಶ್ವರ ದೇವಸ್ಥಾನಗಳಿದ್ದು ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಶ್ರೇಷ್ಠ ಶಿಲ್ಪಕಲೆ ಮೂಲಕ ಹೊರ­ರಾಜ್ಯದಲ್ಲೂ  ಪ್ರಖ್ಯಾತಿಗೊಂಡಿರುವ ಮಾನಪ್ಪ ಚಂದ್ರಶೇಖರಪ್ಪ ಸುತಾರ ಮತ್ತು ವಿರೇಶ ವೀರಭದ್ರಪ್ಪ ಸುತಾರ  ಶಿಲ್ಪಿಗಳು ಇದೇ ಗ್ರಾಮ­ದವ­ರಾಗಿದ್ದು, ಮಾನಪ್ಪ ಚಂದ್ರಶೇಖರಪ್ಪ ಸುತಾರ ತಮ್ಮ ಶಿಲ್ಪ ಕಲೆಯ ಕೈಚಳಕವನ್ನು ಸಾಹಿತ್ಯ ಜಾತ್ರೆಯಲ್ಲಿ ಪ್ರದರ್ಶನ
ಮಾಡಲಿದ್ದಾರೆ.

‘ನಮ್ಮ ಗ್ರಾಮದಲ್ಲಿ ಧಾರ್ಮಿಕ ಕ್ಷೇತ್ರಗಳ ಜಾತ್ರೆಗಳನ್ನು ಪ್ರತಿ ವರ್ಷ ಮಾಡುತ್ತಿದ್ದು, ಇದೀಗ ಸಾಹಿತ್ಯ ಜಾತ್ರೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಗ್ರಾಮದ ಹಿರಿಯರಾದ ಟಿ.ಬಿ. ಮುಂಡವಾಡ ಮತ್ತು ಎಸ್‌.ಜಿ. ತೆಗ್ಗಿನಮನಿ ಹೇಳಿದರು. ಸಾಹಿತ್ಯ ಜಾತ್ರೆಗೆ ಎಲ್ಲ ವ್ಯವಸ್ಥೆಯನ್ನು ಗ್ರಾಮಸ್ಥರು ಎಡಬಿಡದೆ ಮಾಡುತ್ತಿದ್ದಾರೆ. ವಿಶೇಷವಾಗಿ ಕುಡಿಯುವ ನೀರು, ಊಟ, ದೂರದ ಊರುಗಳಿಂದ ಆಗಮಿಸುವ ಅತಿಥಿಗಳಿಗೆ  ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಶಿದ್ರಾಮಗೌಡ ರುದ್ರ­ಗೌಡ ಪಾಟೀಲ ಅವರು ಶಿವಯೋಗಿಶ್ವರ ಪ್ರೌಢ­ಶಾಲೆಗೆ ಭೂದಾನ ನೀಡಿದ ಐದು ಎಕರೆ ವಿಶಾಲ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯ­ಲಿದ್ದು, ಪಕ್ಕದ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಭಾಗದಲ್ಲಿ ಬಹುತೇಕ  ಭೂಪ್ರದೇಶ ಮಳೆ ಆಧಾರಿತ­ವಾಗಿದ್ದು, ನೀರಾ­ವರಿ ಪ್ರಮಾಣ ಅತ್ಯಂತ ಕಡಿಮೆ. ಗ್ರಾಮದ ಸಮೀಪ ತುಂಗಭದ್ರಾ ನದಿ ಇದ್ದರೂ ‘ಸಮುದ್ರದ ನಂಟು ಉಪ್ಪಿಗೆ ಬರ’ ಎನ್ನುವಂತಾಗಿದೆ ಗ್ರಾಮದ ಸ್ಥಿತಿ. ಕುಡಿಯುವ ನೀರಿನ ಸಮಸ್ಯೆ ಎದುರಿ­ಸುತ್ತಿದ್ದರೂ ಸಾಹಿತ್ಯ ಜಾತ್ರೆ ಹಿನ್ನಲೆಯಲ್ಲಿ ಹೆಚ್ಚು­ವರಿ­ಯಾಗಿ ಬೋರವೆಲ್‌ಗಳನ್ನು ಕೊರೆಸಿದ್ದು, ಅಗತ್ಯ ಎನಿಸುವಷ್ಟು ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಏರ್ಪಾಡು ಮಾಡಲಾಗಿದೆ.

ಕನ್ನಡ ನುಡಿಸಿರಿ ಖ್ಯಾತಿಯ ಡಾ. ಮೋಹನ್ ಆಳ್ವ ಸಮ್ಮೇಳನ ಉದ್ಘಾಟನೆ ಮಾಡಲಿದ್ದು, ಕವಿ ಕಲಾವಿದ ಜಿ.ಎಂ. ಶಿರಹಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.