ADVERTISEMENT

ಹಾಕಿ ಮೋಡಿಗಾರ ವಿನೋದ ಕಲಕಂಬಿ...

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:18 IST
Last Updated 10 ಏಪ್ರಿಲ್ 2013, 8:18 IST
ಹಾಕಿ ಆಟದಲ್ಲಿ ತಲ್ಲೆನರಾಗಿರುವ ವಿನೋದ ಕಲಕಂಬಿ.
ಹಾಕಿ ಆಟದಲ್ಲಿ ತಲ್ಲೆನರಾಗಿರುವ ವಿನೋದ ಕಲಕಂಬಿ.   

ಲಕ್ಷ್ಮೇಶ್ವರ: `ಹೆಣ್ಣಿರಲಿ, ಗಂಡಿರಲಿ ಮನೆಗೊಬ್ಬ ಕ್ರೀಡಾಪಟು ಇರಲಿ' `ಕ್ರೀಡೆ ಇಲ್ಲದ ಜೀವನ ಕೀಡೆಗೆ ಸಮ' ಎಂಬ ಮಾತಿನಲ್ಲಿ ಕ್ರೀಡೆಗಳ ಮಹತ್ವ ಎಷ್ಟೆಂಬುದು ಮನವರಿಕೆ ಆಗುತ್ತದೆ. ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮ್ಮ ಪುರಾತನ ಯೋಗ ಪ್ರಾಣಾಯಾಮ ಅತ್ಯಂತ ಸಹಾಯಕವಾಗಿವೆ.

ಅದರಂತೆ ಕ್ರೀಡೆಗಳೂ ನಮ್ಮ ಸರ್ವಾಂಗೀಣ ಪ್ರಗತಿಗೆ ಉಪಕಾರಿಯಾಗಿವೆ. ಆದರೆ ಈಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿ ಕೊಳ್ಳುತ್ತಿರುವ ನಮ್ಮ ಯುವ ಜನಾಂಗ ದಿಂದಾಗಿ  ಆಚಾರ, ವಿಚಾರ, ಕಲೆ, ಸಾಹಿತ್ಯ ಅಷ್ಟೇ ಅಲ್ಲ ಕ್ರೀಡಾರಂಗದಲ್ಲೂ ನಮ್ಮ ದೇಶೀಯತೆ ಕಣ್ಮರೆ ಯಾಗುತ್ತಿರುವುದು ವಿಷಾದನೀಯ.

ಭಾರತೀಯ ಕ್ರೀಡೆಗಳಲ್ಲಿ ಹಾಕಿ ಒಂದು ಬಹುಮುಖ್ಯ ಆಟವಾಗಿದ್ದು ಇದು ನಮ್ಮ ರಾಷ್ಟ್ರೀಯ ಕ್ರೀಡೆ ಸಹ ಆಗಿದೆ. ಭಾರತೀಯರ ಹಾಕಿ ಇಡೀ ಜಗತ್ತಿನಲ್ಲಿಯೇ ಪ್ರಖ್ಯಾತ. ಇಂಥ ಮಹತ್ವದ ಆಟ ಹಾಕಿಯಲ್ಲಿ ಅನುಪಮ ಸಾಧನೆ ಮಾಡಿ ಗದಗ ಜಿಲ್ಲೆಯನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸಿ ಕೀರ್ತಿ ತಂದವರಲ್ಲಿ ಗದುಗಿನ ವಿನೋದ ಎಫ್. ಕಲಕಂಬಿ ಪ್ರಮುಖರು.

ಸದ್ಯ ಲಕ್ಷ್ಮೇಶ್ವರದ ನ್ಯಾಯಾಂಗ ಇಲಾಖೆಯಲ್ಲಿ ಆಡಳಿತ ಶಿರಸ್ತೆದಾರರಾಗಿ ಸೇವೆ ಸಲ್ಲಿಸುತ್ತಿರುವ ವಿನೋದ ಕಲಕಂಬಿಯವರ ಹೆಸರು ಹಾಕಿಯಲ್ಲಿ ಬಹಳ ದೊಡ್ಡದು. ಇವರು ತಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಹಾಕಿ ಕ್ಷೇತ್ರದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ನಿಜಕ್ಕೂ ಗದುಗಿನ ಭಾಗ್ಯವೇ ಸರಿ. 

ವೃತ್ತಿಯಿಂದ ಸರ್ಕಾರಿ ಸೇವೆಯಲ್ಲಿದ್ದು ಪ್ರವೃತ್ತಿಯಿಂದ ಅತ್ಯುತ್ತಮ ಹಾಕಿ ಪಟುವಾಗಿರುವ ಕಲಕಂಬಿಯವರು ಈವರೆಗೆ ಹಲವಾರು ಪ್ರಶಸ್ತಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1993-94ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಾಕಿ ಬ್ಯ್ಲೂ ಆಗಿ ಚೆನ್ನೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ಪದಕ ಪಡೆದು ಕೊಂಡಿದ್ದಾರೆ.

ಅಲ್ಲದೆ ರಾಜ್ಯ ಹಾಕಿ ಅಸೋಯೇಷನ್ ಬೆಂಗಳೂರಿನ ಚಾಂಪಿಯನ್‌ಷಿಪ್ ಸಿ ಡಿವಿಜನ್‌ದಲ್ಲಿ ಪ್ರಶಸ್ತಿ ಪಡೆದಿದ್ದಾರೆ. 95-96ರಲ್ಲಿ ಕವಿವಿ ಧಾರವಾಡದಲ್ಲಿ ನಡೆದ ಅಂತರ್‌ರಾಜ್ಯ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಅದೇ ರೀತಿ ಕಾರವಾರದಲ್ಲೂ ಸಹ ಪ್ರಶಸ್ತಿ ಬಹುಮಾನ ಗಳಿಸಿ 1993ರಲ್ಲಿ ಬೀದರ್‌ನಲ್ಲಿ ಜರುಗಿದ ರಾಜ್ಯಮಟ್ಟದ  ಜವಹರಲಾಲ್ ನೆಹರು ಹಾಕಿ ಟೂರ್ನಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಈಚಲಕರಂಜಿ, ಸಾಂಗ್ಲಿ, ಸೊಲ್ಲಾಪುರ, ಕೊಲ್ಲಾಪುರ, ಮುಂಬೈ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಜರುಗಿದ ಅಖಿಲ ಭಾರತ ಓಪನ್ ಟೂರ್ನಿಯಲ್ಲಿ ಆಡಿ ಪ್ರಶಸ್ತಿ ಫಲಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈಚೆಗೆ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕರ್ನಾಟಕದ ಪರವಾಗಿ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಭಾಗ ವಹಿಸಿದ್ದಲ್ಲದೆ ನ್ಯಾಯಾಂಗ ಇಲಾಖೆಯ ಐದನೇ ಮಹಾ ಸಮ್ಮೇಳನ ಹಾಗೂ ಬೆಳ್ಳಿ ಮಹೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಜರುಗಿದ ಅದ್ದೂರಿ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಬಿ. ಕಬ್ಬಿನ, ಆರ್. ಆರ್. ರಾಮಣ್ಣ ಹಾಗೂ ಭರೂಚಾ ಅವರಿಂದ  ಪ್ರಶಸ್ತಿ ಸ್ವೀಕರಿಸಿ ನ್ಯಾಯಾಂಗ ಇಲಾಖೆಗೆ ಕೀರ್ತಿ ಗರಿ ಮೂಡಿಸಿದ್ದಾರೆ.  
 
ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಇವರು ಏರ್ಪಡಿಸಿದ್ದ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಕಲಕಂಬಿಯವರು 10,000 ಮೀಟರ್ ಹಾಗೂ 5000 ಮೀಟರ್ ಓಟದಲ್ಲಿ ಕ್ರಮವಾಗಿ ಎರಡನೇ ಸ್ಥಾನ ಗಿಟ್ಟಿಸಿ ಕೇವಲ ಹಾಕಿ ಕ್ಷೇತ್ರವಲ್ಲದೆ ಓಟದಲ್ಲೂ ನಾನು ಗೆಲ್ಲಬಲ್ಲೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಸಂಪನ್ನ ವ್ಯಕ್ತಿಯಾಗಿರುವ  ಕಲಕಂಬಿಯವರು ಸದಾ ಹಸನ್ಮುಖಿಗಳು. ಯಾವಾಗಲೂ ನಗು ನಗುತ್ತಾ ಎಲ್ಲರೊಂದಿಗೆ ಬೆರೆಯುವ ಇವರ ಸ್ವಭಾವ ಇತರ ಕ್ರೀಡಾ ಪಟುಗಳಿಗೆ ಮಾದರಿ ಆಗಿದೆ. 

ಕಲಕಂಬಿಯವರ ಸಾಧನೆಯನ್ನು  ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಚ್.ಟಿ. ಆವಿನ, ಲಕ್ಷ್ಮೇಶ್ವರದ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಉಮೇಶ ಮೂಲಿಮನಿ, ಜೆಎಂಎಫ್‌ಸಿ ಮತ್ತು ಕಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಆಯ್.ಕಮತಗಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ವಕೀಲರ ಸಂಘದ ಸದಸ್ಯರು ಗುರುತಿಸಿ ಅವರನ್ನು ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT