ADVERTISEMENT

ಹುಡ್ಕೋ ಮನೆಗಳಿಗೆಲ್ಲ ಕೆಂದೂಳ ಮಜ್ಜನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:40 IST
Last Updated 7 ಫೆಬ್ರುವರಿ 2011, 10:40 IST

ಗದಗ: ನಗರದ ದೊಡ್ಡ ಬಡಾವಣೆಗಳಲ್ಲಿ ಒಂದಾದ ಹುಡ್ಕೋ ಬಡಾವಣೆಯಲ್ಲಿ ಕಳೆದ ಹದಿನೈದು ದಿನಗಳಿಂದ ಬಹುತೇಕ ನೂರಾರು ಮನೆಗಳು ತಮ್ಮ ನೈಜ ಬಣ್ಣ ಕಳೆದುಕೊಂಡು ಕೆಂದೂಳಿನಿಂದ ಲೇಪನದೊಂದಿಗೆ ‘ಹೊಸ ರೂಪ’ ಪಡೆದುಕೊಂಡಿವೆ.ಕಣ್ಮನ ಸೆಳೆಯುವ ವಿವಿಧ ವಿನ್ಯಾಸ-ಬಣ್ಣದಿಂದ ಅಲಂಕೃತಗೊಂಡಿದ್ದ ಕಾಂಪೌಂಡ್, ಬಾಗಿಲು, ಕಿಟಕಿಗಳು ಎಲ್ಲವೂ ಕೆಂಪುಮಣ್ಣಿನ ಬಣ್ಣವನ್ನು ಹಚ್ಚಿಕೊಂಡು ಏನು ಮಾಡದ ಸ್ಥಿತಿಯಲ್ಲಿವೆ.

ಇನ್ನೂ ಬೆಳಿಗ್ಗೆ ಮತ್ತು ಸಂಜೆ ಸಮಯ ಹುಡ್ಕೋ ಬಡಾವಣೆಯಲ್ಲಿ ವಾಹನಗಳ ಭರಾಟೆ ಜಾಸ್ತಿ, ವಿವಿಧ ಇಲಾಖೆಗಳು, ಖಾಸಗಿ ಕಂಪೆನಿಗಳು, ಶಾಲೆ-ಕಾಲೇಜುಗಳಲ್ಲಿ ನೌಕರಿ ಮಾಡುವವರೆ ಅಧಿಕವಾಗಿರುವುದರಿಂದ ಎಲ್ಲರೂ ಒಂದೇ ಸಮಯಕ್ಕೆ ರಸ್ತೆಗೆ ಇಳಿಯುತ್ತಾರೆ. ಇದೇ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಅತ್ತ-ಇತ್ತ ಭಾರೀ ವಾಹನಗಳು ಬಂದರೇ ಸಾಕು. ಪರಿಣಾಮ ಎಲ್ಲರಿಗೂ ದೂಳಿನ ಮಜ್ಜನವಾಗುತ್ತದೆ. ಮನೆಯಿಂದ ಶುಭ್ರವಾಗಿ ಹೊರಟ್ಟಿದ್ದವರು, ಕೆಲಸದ ಜಾಗಕ್ಕೆ ಹೋಗುವ ಹೊತ್ತಿಗೆ ಕೆಂಬಣ್ಣ ಪಡೆದುಕೊಂಡಿರುತ್ತಾರೆ. ಸಂಜೆ ಮನೆಗೆ ಬಂದು ಬಟ್ಟೆ-ಬರೆಗಳನ್ನು ಒಂದು ಸಾರಿ ಜಾಡಿಸಿದರೆ ಸಾಕು. ಮಣಗಟ್ಟಲೆ ಮಣ್ಣು ಮನೆಯಲ್ಲಿ ಬೀಳುತ್ತದೆ.

ಈ ದೂಳಿನ ಸ್ನಾನಕ್ಕೆ ಕಾರಣ ಹುಡುಕುತ್ತಾ ಹೋದರೆ ಕಣ್ಣಿಗೆ ಗೋಚರವಾಗುವುದು, ಅಲ್ಲಿನ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ. ರಸ್ತೆ ರಿಪೇರಿ ಮಾಡಲು ತೊಡಗಿ ಸರಿ ಸುಮಾರು ಒಂದು ತಿಂಗಳಾಗಿದೆ. ಕಾಮಗಾರಿಯನ್ನು ಪ್ರಾರಂಭ ಮಾಡಿದವರು ರಸ್ತೆಯ ಮೇಲೆ ಕೆಂಪು ಮಣ್ಣನ್ನು ಎರಚಿ ಹೋಗಿದ್ದಾರೆ ಅಷ್ಟೇ. ಹದಿನೈದು ದಿನದಿಂದಲೂ ಯಾರೂ ಇತ್ತ ತಲೆ ಹಾಕಿಲ್ಲ. ಪ್ರತಿನಿತ್ಯ ಹಗಲು ಹೊತ್ತಿನಲ್ಲಿ ಮನೆಯ ಒಳಗೆ ದುಳು ತುಂಬಿಕೊಳ್ಳುತ್ತದೆ. ಇದರಿಂದಾಗಿ ಮನೆಯ ಒಳಗೆ ತಿರುಗಾಡಲು ಆಗುವುದಿಲ್ಲ. ಕೆಂಪು ಮಣ್ಣು ಹರಡಿಕೊಂಡಿರುತ್ತದೆ ಎನ್ನುವುದು ಇಲ್ಲಿನ ಮಹಿಳೆಯರ ಅಳಲು.

‘ರಸ್ತೆ ಯಾವತ್ತಾದರೂ ಮಾಡಿ. ಈಗ ಮಣ್ಣಿನ ಮೇಲೆ ದೂಳು ಏಳದಂತೆ ನೀರನ್ನು ಹಾಕಿ ಎಂದು ಸಂಬಂಧಿಸಿದವರನ್ನು ಕೇಳಿದರೆ, ಉಡಾಫೆಯ ಉತ್ತರ ನೀಡುತ್ತಾರೆ. ರಸ್ತೆ ಮಾಡಬೇಕಾದರೆ ಈ ಮಣ್ಣು ಸಂಪೂರ್ಣವಾಗಿ ಮೇಲೆದ್ದು ಹೋಗಬೇಕು ಎನ್ನುತ್ತಾರೆ ಅಧಿಕಾರಿಗಳು’ ಎಂಬುದು ಎಂದು ಸ್ಥಳೀಯ ನಾಗರಿಕರ ಆರೋಪವಾಗಿದೆ.

ಹುಡ್ಕೋ ಬಡಾವಣೆಯಲ್ಲಿ ಶಾಲೆಗಳೂ ಅಧಿಕವಾಗಿವೆ. ಮಕ್ಕಳು ರಸ್ತೆಯಲ್ಲಿ ಹೋಗಬೇಕಾದರಂತೂ ಬಹಳ ಪ್ರಯಾಸ ಪಡಬೇಕು. ಅಲ್ಲದೆ ಶಾಲೆಗಳ ಬಸ್‌ಗಳು ಇದ್ದರೂ ಅವುಗಳಿಗೂ ದೂಳು ತುಂಬುವುದರಿಂದ ಶಾಲಾ ಮಕ್ಕಳಿಗೆ ದೂಳು ಸಂಬಂಧಿ ಕಾಯಿಲೆಗಳು ಆಕ್ರಮಣ ಮಾಡುತ್ತಿವೆ.ನಗರ ಸಾರಿಗೆ ಬಸ್‌ಗಳು ಸಿದ್ಧಲಿಂಗ ನಗರ ಸೇರಿದಂತೆ ಇನ್ನು ಅನೇಕ ಕಡೆಗಳಿಗೆ ಹೋಗಬೇಕಾದರೆ ಹುಡ್ಕೋ ಬಡಾವಣೆಯ ಈ ಮುಖ್ಯ ರಸ್ತೆಯಿಂದಲೇ ಹೋಗಬೇಕು. ಪ್ರತಿನಿತ್ಯ ಹತ್ತಾರು ಬಸ್‌ಗಳು ಎಡಬಿಡದೆ ಸಂಚಾರ ಮಾಡುತ್ತವೆ. ಬೈಕ್- ಆಟೋ, ಲಾರಿ, ಸ್ಕೂಲ್ ಬಸ್.. ಒಂದೆ-ಎರಡೇ ಇಷ್ಟು ವಾಹನಗಳು ರಸ್ತೆಯಲ್ಲಿ ಓಡಾಡುವುದರಿಂದ ಅಷ್ಟೂ ದೂಳು ಮನೆಗಳಿಗೆ ತುಂಬುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎನ್ನುವುದು ನಿವಾಸಿಗಳ ಒಕ್ಕೂರಲಿನ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.