ADVERTISEMENT

‘ಹೂವು ಚೆಲುವೆಲ್ಲ ನಂದೆಂದಿತು...’

ಲಕ್ಷ್ಮೇಶ್ವರದಲ್ಲಿ ಅರಳಿದ ಗುಲ್ ಮೊಹರ್

​ಪ್ರಜಾವಾಣಿ ವಾರ್ತೆ
Published 12 ಮೇ 2018, 9:14 IST
Last Updated 12 ಮೇ 2018, 9:14 IST
ಲಕ್ಷ್ಮೇಶ್ವರದ ಪುರಸಭೆ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ಕೆಂಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಗುಲ್‌ಮೊಹರ ಮರ
ಲಕ್ಷ್ಮೇಶ್ವರದ ಪುರಸಭೆ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ಕೆಂಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಗುಲ್‌ಮೊಹರ ಮರ   

ಲಕ್ಷ್ಮೇಶ್ವರ: ‘ಹೂವು ಚೆಲುವೆಲ್ಲ ನಂದೆಂದಿತು’ ಎಂಬ ಕವಿ ನುಡಿಯಂತೆ ಸಧ್ಯ ಕೆಂಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಗುಲ್‌ಮೊಹರ್‌ ಮರಗಳು ಪರಿಸರ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಿವೆ.

ರಸ್ತೆ ಇಕ್ಕೆಲ, ಅಗಡಿ ಎಂಜಿನಿಯರ್‌ ಕಾಲೇಜು, ಪುರಸಭೆ ಕಲಾ ಮಹಾವಿದ್ಯಾಲಯ, ಪೊಲೀಸ್‌ ಠಾಣೆ, ಪ್ರವಾಸಿ ಮಂದಿರ ಹೀಗೆ ಹತ್ತು ಹಲವು ಕಡೆಗಳಲ್ಲಿನ ಗುಲ್‌ಮೊಹರ್‌ ಮರಗಳು ಮೈ ತುಂಬ ಕೆಂಪು ಬಣ್ಣದ ಹೂವುಗಳನ್ನು ಅರಸಿಕೊಂಡು ದುಂಬಿಗಳನ್ನು ಸೆಳೆಯುತ್ತಿವೆ. ಸುಡು ಬಿಸಿಲಿಗೆ ಹೂವುಗಳು ಮತ್ತಷ್ಟು ಕೆಂಪಾಗಿ ಕಾಣುತ್ತಿವೆ.

ಪ್ರತಿವರ್ಷ ಮೇ ತಿಂಗಳ ಬೇಸಿಗೆಯಲ್ಲಿ ಗುಲ್‌ಮೊಹರ್‌ ಮರಗಳು ಹೂವು ಬಿಡುವುದು ಪ್ರಕೃತಿಯ ಸಹಜ ಕ್ರಿಯೆ. ತಲೆ ಸುಡುವ ಬಿಸಿಲಲ್ಲೂ ಕೆಂಬಣ್ಣದ ಹೂವುಗಳು ನೋಡುಗರ ಕಣ್ಣು ಕುಕ್ಕುತ್ತವೆ. ಗಾಳಿ ಬಿಟ್ಟಾಗ ಕೆಳಗೆ ಬೀಳುವ ಹೂವುಗಳನ್ನು ಆರಿಸಿಕೊಂಡು ಚಿಕ್ಕ ಚಿಕ್ಕ ಮಕ್ಕಳು ಅದೇ ಮರಗಳ ನೆರಳಲ್ಲಿ ಆನಂದದಿಂದ ಆಟವಾಡುವ ದೃಶ್ಯ ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತಿದೆ.

ADVERTISEMENT

ಕೆಲ ವರ್ಷಗಳಿಂದ ಸರ್ಕಾರಿ ಎಲ್ಲ ಕಚೇರಿಗಳ ಮುಂದೆ ಈ ಮರಗಳನ್ನು ಬೆಳೆಸುವುದ ಸರ್ವೆ ಸಾಮಾನ್ಯವಾಗಿದೆ. ವೈಜ್ಞಾನಿಕ ಭಾಷೆಯಲ್ಲಿ ಇದಕ್ಕೆ ಡೆಲೋನಿಕ್ಸ್‌ರೆಜಿಯಾ ಎಂಬ ಹೆಸರಿನಿಂದ ಕರೆಯುತ್ತಾರೆ. ಇದರ ಅಂದ ಚೆಂದಕ್ಕೆ ಮಾರುಹೋಗದವರೇ ವಿರಳ. ಹೀಗಾಗಿ ಅರಣ್ಯ ಇಲಾಖೆಯವರು ಈ ಮರವನ್ನು ನರ್ಸರಿಯಲ್ಲಿ ಬೆಳೆಸಿ ನಂತರ ರಸ್ತೆಯ ಎರಡೂ ಬದಿಯಲ್ಲಿ ನೆಡುತ್ತಾರೆ.

ಗುಲ್‌ಮೊಹರ್‌ ಸಸಿಗಳನ್ನು ಕುರಿ, ಆಡುಗಳು ತಿನ್ನುವುದಿಲ್ಲ. ಕಾರಣ ಅರಣ್ಯ ಇಲಾಖೆ ಇದನ್ನು ಬೆಳೆಸುವಲ್ಲಿ ಮುಂದಾಗಿದೆ. ಇದು ಜಗತ್ತಿನ ತುಂಬೆಲ್ಲ ಪಸರಿಸಿಕೊಂಡಿದ್ದು ಇದಕ್ಕೆ ಹೆಚ್ಚಿನ ತೇವಾಂಶದ ಅಗತ್ಯವೂ ಇಲ್ಲ.

‘ಗುಲ್‌ಮೊಹರ್‌ ಗಿಡಗಳು ಕೆಂಪು ಹೂವುಗಳಿಂದ ಜನರನ್ನು ಆಕರ್ಷಿಸುತ್ತಿವೆ. ಇವು ಕಣ್ಣಿಗೆ ಹಬ್ಬ ನೀಡುತ್ತಿವೆ’ ಎಂದು ಕವಿ ಪೂರ್ಣಾಜಿ ಖರಾಟೆ ಹೇಳುತ್ತಾರೆ.

**
ಈಚಿನ ದಿನಗಳಲ್ಲಿ ಗುಲ್‌ಮೊಹರ್‌ ಮರಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದೇವೆ. ಕಾರಣ ಇವುಗಳನ್ನು ಪ್ರಾಣಿಗಳು ತಿನ್ನುವುದಿಲ್ಲ. ಹೀಗಾಗಿ ಇವು ಯಾವುದೇ ತೊಂದರೆ ಇಲ್ಲದೆ ಮರವಾಗಿ ಬೆಳೆಯುತ್ತವೆ
- ವೀರೇಶ, ವಲಯ ಅರಣ್ಯಾಧಿಕಾರಿ

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.