ADVERTISEMENT

‘ಯೋಜನೆ ಸದುಪಯೋಗವಾಗಲಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:34 IST
Last Updated 17 ಸೆಪ್ಟೆಂಬರ್ 2013, 5:34 IST

ಡಂಬಳ: ‘ಗ್ರಾಮೀಣಾಭಿವೃದ್ಧಿಗೆ ಪೂರ­ಕ­­­ವಾಗಿರುವ ಯೋಜನೆಗಳ ಸದುಪ­ಯೋಗ ಮಾಡಿಕೊಂಡು ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು’ ಎಂದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.

ಸ್ಥಳೀಯ ಗ್ರಾ.ಪಂ. ಆವರಣದಲ್ಲಿನ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಆಶ್ರಯ ಮನೆ, ಸಾರ್ವಜನಿಕ ಸುಲಭ್ ಶೌಚಾಲಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿ­ಸುವಂತೆ ಶಾಸಕರಿಗೆ ಮನವಿ ಮಾಡಿದರು.

ಗ್ರಾಮ ಪಂಚಾಯ್ತಿ ಸದಸ್ಯ ವಿರೂ­ಪಾಕ್ಷಪ್ಪ ಯಲಿಗಾರ ಮಾತನಾಡಿ, ‘ಮಹಾತ್ಮಗಾಂಧಿ ರಾಷ್ಟ್ರೀಯ  ಉದ್ಯೋಗ ಖಾತ್ರಿ ಯೋಜನೆ ಅಡಿ­ಯಲ್ಲಿ ಉದ್ಯೋಗ ಮಾಡಿದ ಕಾರ್ಮಿಕರಿಗೆ ಕೂಲಿ ಪಾವತಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ. ಹಾಗಾಗಿ ತ್ವರಿತವಾಗಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಒ ಡಿ.ಮೋಹನ ಮಾತನಾಡಿ, ಪಿಡಿಒ ಅವರಿಗೆ ತಕ್ಷಣ ಉದ್ಯೋಗ ಖಾತ್ರಿ ಯೋಜನೆ ಕೂಲಿಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು. ಗ್ರಾಮ ಪಂಚಾಯ್ತಿ ಸದಸ್ಯ ಡಿ.ಪ್ರಸಾದ ಮಾತನಾಡಿ, ‘ಇಂದಿರಾ ಆವಾಸ್‌ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಫಲಾನು­ಭವಿಗಳಿಗೆ 10 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ತ್ವರಿತ­ವಾಗಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳ­ಬೇಕು’ ಎಂದು ಆಗ್ರಹಿಸಿ­ದರು.

ಹೊಸ ಡಂಬಳ ಗ್ರಾಮದ ಆಶ್ರಯ ಮನೆಗಳ ಪಟ್ಟಾ ಹಾಗೂ ಉತಾರ­ಗಳನ್ನು ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಯಿತು.
ಗ್ರಾ.ಪಂ.ಅಧ್ಯಕ್ಷ ಮಲ್ಲಣ್ಣ ಯರಾಶಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಯೋಜನೆಯಲ್ಲಿ ಕೈಗೊಳ್­ಳಲಾಗುವ ಕಾಮಗಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಿ.ಆರ್. ಗುಡಿಸಾಗರ, ರವಿ ದಂಡಿನ, ವಿ.ಬಿ. ಸೋಮನಕಟ್ಟಿಮಠ, ಡಿ.ಬಿ.­ಡೋಲಿ. ಚನ್ನಪ್ಪ ಪ್ಯಾಟಿ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಗಡಗಿ, ಯಲ್ಲಮ್ಮ ಪೂಜಾರ,  ಮಾಜಿ ಗ್ರಾ.ಪಂ ಅಧ್ಯಕ್ಷ ಶಂಕ್ರವ್ವ ಬಚನಳ್ಳಿ, ಶಬಿನಾ ಅತ್ತಾರ, ಗವಿಸಿದ್ದಪ್ಪ ಹಾದಿಮನಿ, ಪಿ.ಡಿ.ಓ ಎಸ್.ಎಂ. ಸಂಶಿ. ಕಾರ್ಯ­ದರ್ಶಿ ಎಸ್.ಎಚ್. ಡಂಬಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.