ADVERTISEMENT

‘ರೋಣಕ್ಕೆ ಕೆರೆಯಿಂದ ಕುಡಿಯುವ ನೀರು’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 5:58 IST
Last Updated 11 ಡಿಸೆಂಬರ್ 2013, 5:58 IST

ರೋಣ:- ತಾಲ್ಲೂಕಿನ ಜಿಗಳೂರ ಗ್ರಾಮದ ಸಮೀಪ ನಿರ್ಮಾಣವಾಗು­ತ್ತಿರುವ ಬೃಹತ್‌ ಕೆರೆಯಿಂದ ರೋಣ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಪೂರೈಸ­ಲಾಗುವುದು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು. ಅವರು ಇತ್ತೀಚೆಗೆ ರೋಣ ಪುರಸಭೆ­ಯ ನೂತನ ಆಡಳಿತ ಮಂಡಳಿ ವತಿ­ಯಿಂದ ಜರುಗಿದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಾಜಿ ಸಚಿವರು ಕುಡಿಯುವ ನೀರನ್ನು ಇಟ್ಟು­ಕೊಂಡು ರಾಜಕೀಯ ಮಾಡುತ್ತಿ­ರುವುದು ನಾಚಿಕೆ ತರುವ ಸಂಗತಿ ಮತ್ತು ಸಣ್ಣತನದ ಪರಮಾವಧಿ. ಕ್ಷೇತ್ರದ ಮಾಜಿ ಸಚಿವರ ಮಾತುಗಳಿಗೆ ಸಾರ್ವ­ಜನಿಕರು ಬೆಲೆ ಕೊಡದೆ ಮತ ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಬೇಕು. ಈ ಹಿಂದೆ ಬೃಹತ್‌ ಕೆರೆ ನಿರ್ಮಿಸಲು ರೋಣದ ಜನತೆ ಜಮೀನು ನೀಡುವ ಮೂಲಕ ತಮ್ಮ ದೊಡ್ಡತನ ಮೆರೆ­ದಿದ್ದರು. ಆದರೆ ಮಾಜಿ ಸಚಿವರು ರೋಣದ ಜನರಿಗೆ ಏನು ನೀರು ಎಂದು ತಮ್ಮ ಇಬ್ಬಗೆಯ ನೀತಿ ಪ್ರದರ್ಶನ ಮಾಡು­­ತ್ತಿರುವುದು ಅವರ  ಇನ್ನೊಂದು ಮುಖ ಎಂದು ಟೀಕಿಸಿದರು.

ಜಿಗಳೂರ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿ­ರುವ ಕುಡಿಯುವ ನೀರಿನ ಕೆರೆಗೆ 40  ಕೋಟಿ ರೂಪಾಯಿ ಹೆಚ್ಚಿನ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು ನವಲಗುಂದ ಮತ್ತು ಬದಾಮಿ ಹೆದ್ದಾರಿ ಅಭಿವೃದ್ಧಿಗೆ 1. 6 ಕೋಟಿ ರೂಪಾಯಿ ಅನುದಾನ  ಒದಗಿಸಲಾಗಿದೆ, ಪ್ರತಿ ಗ್ರಾಮಗಳಿಗೆ ಮತ್ತು ಪಟ್ಟಣಗಳಿಗೆ ಎಲ್ಲಾ ತೀತಿಯ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ  ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ರೋಣ ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಳಿದಿವೆ. ಅವುಗಳನ್ನು ಇತ್ಯರ್ಥಪಡಿಸಲು ಮೊದಲ ಆದ್ಯತೆ ನಿಡಬೇಕಾಗಿದ್ದು ಕ್ರಿಯಾಯೋಜನೆ ರೂಪಿಸಲಾಗಿದ್ದು ಶೀಘ್ರ ಪಟ್ಟಣದಲ್ಲಿ ಕಾಮಗಾರಿಗಳನ್ನು ಆರಂಭಿಸಲಾ­ಗುವುದು. ಜೊತೆಗೆ ಪಟ್ಟಣದ ಸೌಂದರ್ಯದ ಬಗ್ಗೆ ಹೆಚ್ಚು ಅನುದಾನ ಬಳಕೆ ಮಾಡುವ ಮೂಲಕ ಚರಂಡಿ ಮತ್ತು ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು  ಎಂದರು.

ಸಮಾರಂಭದಲ್ಲಿ ಪುರಸಭೆಯ ಅಧ್ಯಕ್ಷ ಮುತ್ತಣ್ಣಾ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ತಹಶೀಲ್ದಾರ್‌ ಎ.ಜಿ.ಪಂಡಿತ, ಶಫೀಕ್‌ ಮೂಗನೂರ, ತೋಟಪ್ಪ ನವಲಗುಂದ, ಸಿ.ಕೆ.ಸುಂಕದ, ವಿ.ಆರ್. ಗುಡಿಸಾಗರ, ಶಿವಪುತ್ರಪ್ಪ ದೊಡ್ಡಮನಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.