ADVERTISEMENT

24x7 ನೀರು: ಸಂಕನೂರ ಎಚ್ಚರಿಕೆ

6 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಸಲು ಜುಲೈ ಗಡುವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:51 IST
Last Updated 1 ಜೂನ್ 2018, 12:51 IST

ಗದಗ: ‘ಗದಗ–ಬೆಟಗೇರಿ ಅವಳಿ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದ್ದು, ಜುಲೈ ಕೊನೆಯ ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ, 6 ವಲಯಗಳಿಗೆ ನೀರು ಪೂರೈಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆಯಲ್ಲಿ ಗುರುವಾರ ಕುಡಿಯುವ ನೀರು ಮತ್ತು ನಗರೋತ್ಥಾನ ಯೋಜನೆಗೆ ಸಂಬಂಧಿಸಿದಂತೆ ನಡೆದ  ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗದಗ–ಬೆಟಗೇರಿ ಅವಳಿ ನಗರದ 35 ವಾರ್ಡ್‌ಗಳನ್ನು 12 ವಲಯಗಳಾಗಿ ವಿಂಗಡಿಸಿ, 24x7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಪರೀಕ್ಷಾರ್ಥ ನೀರು ಪೂರೈಕೆ ಆರಂಭಗೊಂಡು ಒಂದು ವರ್ಷ ಸಮೀಪಿಸುತ್ತಾ ಬಂದರೂ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಮೊದಲ ಹಂತದಲ್ಲಿ 6 ವಲಯಗಳ ಕಾಮಗಾರಿ ನಡೆಯುತ್ತಿದ್ದು ಇನ್ನೂ 7.5 ಕಿ.ಮೀ. ಪೈಪ್‌ ಲೈನ್ ಅಳವಡಿಕೆ, 2 ಸಾವಿರ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದೆ. ಇದನ್ನು ವೇಗವಾಗಿ ಪೂರ್ಣಗೊಳಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಇನ್ನುಳಿದ 6 ವಲಯಗಳ ಕಾಮಗಾರಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಕೆಯುಐಡಿಎಫ್‌ಸಿಎ ಎಂಜಿನಿಯರ್‌ ಬಸವರಾಜ ಬಿದಕರಟ್ಟಿ ಸಭೆಗೆ ತಿಳಿಸಿದರು.

‘ನಗರೋತ್ಥಾನ ಯೋಜನೆಯ 2ನೇ ಹಂತದಲ್ಲಿ ಸಿಡಿಒ ಜೈನ್ ಶಾಲೆಯ ಬಳಿಯಿರುವ ಸಿ.ಸಿ. ರಸ್ತೆ, ಪಂಚಾಕ್ಷರಿ ನಗರದ 3ನೇ ಕ್ರಾಸ್‌ನ ಡಾಂಬರ್‌ ರಸ್ತೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕೆಲವೆಡೆ ಕಾಮಗಾರಿ ಪ್ರಾರಂಭಗೊಂಡು 5 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ’ ಎಂದು ಗುತ್ತಿಗೆದಾರ ಮುರಳಿ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

ಪೌರಾಯುಕ್ತ ಮನ್ಸೂರ್ ಅಲಿ, ಬಂಡಿವಡ್ಡರ, ಮರೀಗೌಡ್ರ ಹಾಗೂ ಮಾಧವ ಗಣಾಚಾರಿ, ರಾಘವೇಂದ್ರ ಯಳವತ್ತಿ, ಮಂಜುನಾಥ ಮುಳಗುಂದ, ಜಯಶ್ರೀ ಬೈರವಾಡೆ, ಪಾರ್ವತಿ ಪತ್ತಾರ, ವಂದನಾ ವರ್ಣೆಕರ, ನೀಲಾ, ಜಗನ್ನಾಥಸಾ ಭಾಂಡಗೆ ಇದ್ದರು.
**
ಗಂಗಿಮಡಿ ರಸ್ತೆ, ಬೆಟಗೇರಿ ಭಾಗದ ಹುಲಕೋಟಿ ಶಾಲೆ ರಸ್ತೆ, 4ನೇ ವಾರ್ಡ್‌ನ ಸುಭಾಷ ರಸ್ತೆಯನ್ನು ಅಗೆಯಲಾಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸುವುದು
ಬಾಲಕೃಷ್ಣ, ನಗರೋತ್ಥಾನ ಯೋಜನಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.