ADVERTISEMENT

4 ಜಿಲ್ಲೆಯ ಕಾಂಗ್ರೆಸ್ ಸಮಾವೇಶ ನಾಳೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:10 IST
Last Updated 25 ಫೆಬ್ರುವರಿ 2012, 10:10 IST

ಹುಬ್ಬಳ್ಳಿ: `ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಕೇಂದ್ರ ಸಚಿವ ಹಾಗೂ ಬೆಳಗಾವಿ ವಿಭಾಗದ ಉಸ್ತುವಾರಿ ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾಲ್ಕು ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಮಾವೇಶವು ಇಲ್ಲಿಯ ಗೋಕುಲ್ ಗಾರ್ಡನ್‌ನಲ್ಲಿ ಇದೇ 26ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ~ ಎಂದು ಹುಬ್ಬಳ್ಳಿ- ಧಾ ರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಂ. ಹಿಂಡಸಗೇರಿ ತಿಳಿಸಿದರು.

ಸಮಾವೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ಸಮಾವೇಶದಲ್ಲಿ ಗದಗ, ಹಾವೇರಿ, ಅವಳಿನಗರ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಭಾಗದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸುವರು. ಪಕ್ಷದ ಸಂಘಟನೆ ಮತ್ತು ಚುನಾವಣೆ ರಾಜಕೀಯ ಕುರಿತು ಚರ್ಚಿಸಲಾಗುವುದು~ ಎಂದರು.

`ಪ್ರಸ್ತುತ ಪಕ್ಷವು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಇದಕ್ಕೆ ಕಾರಣ ಹುಡುಕುತ್ತ, ಪಕ್ಷವನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಯಲಿದೆ.

ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ಸೂಚಿಸುವ ಜೊತೆಗೆ ಜನರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಬಗ್ಗೆಯೂ ಪಕ್ಷದ ವರಿಷ್ಠರ ಜೊತೆ ಮುಕ್ತವಾಗಿ ಚರ್ಚಿಸಲಾಗುವುದು~ ಎಂದರು.

ಮಾಜಿ ಸಚಿವ ಎಸ್.ಆರ್. ಮೊರೆ, ಪಕ್ಷದ ಸಂಘಟನೆ ಜೊತೆಗೆ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಮಾನಸಿಕವಾಗಿ ಒಂದಾಗಬೇಕು. ವೈಯಕ್ತಿಕ ಭಿನ್ನಾಭಿಪ್ರಾಯ ಬಿಟ್ಟು ಜನರ ಬಳಿ ಹೋಗುವ ಮನಸ್ಥಿತಿ ಬರಬೇಕಾಗಿದೆ. ಹಾಗಾದಾಗ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒಂದೇ ವೇದಿಕೆಗೆ ತಂದು ಭಿನ್ನಾಭಿಪ್ರಾಯ ಹೋಗಲಾಡಿಸುವುದು ಸಮಾವೇಶದ ಗುರಿಯಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಜಬ್ಬಾರಖಾನ್ ಹೊನ್ನಾಳಿ, ಶಿವಾ ನಾಯ್ಕ, ಮಾಜಿ ಮಹಾಪೌರ ಅನಿಲಕುಮಾರ ಪಾಟೀಲ, ಎಫ್.ಎಚ್. ಜಕ್ಕಪ್ಪನವರ, ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ್ ಚಿಂಚೋರೆ, ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ, ಯಾಸೀನ್ ಹಾವೇರಪೇಟ ಮಾತನಾಡಿದರು. ಬಾಬಾಜಾನ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ಅನ್ವರ್ ಮುಧೋಳ, ದೇವಕಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.