ADVERTISEMENT

ಯುವತಿಯರಿಗಾಗಿ 4 ವಸತಿ ಕಾಲೇಜು ಸ್ಥಾಪನೆ

ಡಾ. ಬಾಬು ಜಗಜೀವನರಾಂ ಭವನ ಉದ್ಘಾಟಿಸಿ ಗೋವಿಂದ ಕಾರಜೋಳ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 16:33 IST
Last Updated 5 ಜನವರಿ 2020, 16:33 IST
ಗದುಗಿನಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ನೀಡಲಾದ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಿ.ಸಿ. ಪಾಟೀಲ, ಶಾಸಕ ಎಚ್‌.ಕೆ. ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಇದ್ದಾರೆ
ಗದುಗಿನಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ನೀಡಲಾದ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಿ.ಸಿ. ಪಾಟೀಲ, ಶಾಸಕ ಎಚ್‌.ಕೆ. ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಇದ್ದಾರೆ   

ಗದಗ: ‘ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 46 ವಿದ್ಯಾರ್ಥಿ ನಿಲಯಗಳು, 12 ವಸತಿ ಶಾಲೆಗಳಿದ್ದು 5,500 ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ನೀಡಲಾಗುತ್ತಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ 402 ವಿದ್ಯಾರ್ಥಿಗಳಿಗೆ ₹87 ಲಕ್ಷ ನಗದು ಪುರಸ್ಕಾರ ನೀಡಿರುವುದು ಅಭಿನಂದನೀಯ ಕಾರ್ಯವಾಗಿದೆ’ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿನ ಡಿ.ಸಿ. ಮಿಲ್‌ ರಸ್ತೆಯಲ್ಲಿಯ ಸಮಾಜ ಕಲ್ಯಾಣ ಇಲಾಖೆಯಿಂದ ₹3.98 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಡಾ. ಬಾಬು ಜಗಜೀವನರಾಂ ಭವನ ಉದ್ಘಾಟಿಸಿ ಮಾತನಾಡಿದರು.

‘1995ರಲ್ಲಿ ರಾಜ್ಯದಲ್ಲಿ ಒಂದೇ ವಸತಿ ಶಾಲೆಯಿತ್ತು. ಇಂದು 824 ವಸತಿ ಶಾಲೆಗಳಲ್ಲಿ 1.7 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಒಟ್ಟಾರೆ 1,233 ವಿದ್ಯಾರ್ಥಿನಿಲಯಗಳಲ್ಲಿ 3.71 ಲಕ್ಷ ಪರಿಶಿಷ್ಟ ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಪ್ರಸಕ್ತ ರಾಜ್ಯ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕಾಗಿ ₹30 ಸಾವಿರ ವಿಶೇಷ ಘಟಕ ಯೋಜನೆ ರೂಪಿಸಿದೆ. ₹1,000 ಕೋಟಿ ವೆಚ್ಚದಲ್ಲಿ ಭೂ ಒಡೆತನ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ₹247 ಕೋಟಿ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಟರ ಸ್ವಯಂ ಉದ್ಯೋಗ , ಕೌಶಲ್ಯಾಭಿವೃದ್ಧಿ ಹಾಗೂ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ರಥಮಾದ್ಯತೆ ನೀಡಿದೆ’ ಎಂದು ಡಿಸಿಎಂ ಹೇಳಿದರು.

ADVERTISEMENT

‘ಬಡವರ, ರೈತರ, ಪರಿಶಿಷ್ಟರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದಿಂದ ನೀಡಲಾದ ಸೌಲಭ್ಯಗಳು ಸಾರ್ವಜನಿಕವಾಗಿ ಉಪಯೋಗವಾಗುವಂತೆ ಬಳಕೆಯಾಗುವುದು ಬಹು ಮುಖ್ಯವಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಿ.ಸಿ. ಪಾಟೀಲ ಹೇಳಿದರು.

‘ಗದಗ-ಬೆಟಗೇರಿ ಅವಳಿ ನಗರದಲ್ಲಿ 7 ಸೇರಿ ಜಿಲ್ಲೆಯಲ್ಲಿ ಒಟ್ಟು 14 ಹೆಚ್ಚುವರಿ ವಿದ್ಯಾರ್ಥಿನಿಲಯಗಳ ಕೊರತೆಯಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 5 ವಿದ್ಯಾರ್ಥಿನಿಲಯಗಳಿಗೆ ಮಂಜೂರಾತಿ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದರು.

‘ಗದಗ–ಬೆಟಗೇರಿ ಅವಳಿ ನಗರದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರ ಮಂಜೂರು ಮಾಡಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ನೀಡಲಾದ ವಿವಿಧ ಸೌಲಭ್ಯಗಳನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಿ.ಸಿ. ಪಾಟೀಲ ಅವರು ಫಲಾನುಭವಿಗಳಿಗೆ ವಿತರಿಸಿದರು. ಇದಕ್ಕೂ ಮುನ್ನ ಬೆಟಗೇರಿ ಭಾಗದಲ್ಲಿ ಹರಿಣಶಿಕಾರಿಗಳ ಸಮುದಾಯದವರಿಗೆ ₹2.20 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 40 ಮನೆಗಳನ್ನು, ಹುಯಿಲಗೋಳ ರಸ್ತೆಯಲ್ಲಿ ₹3.38 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವೃತ್ತಿಪರ ಬಾಲಕಿಯರ ವಸತಿ ನಿಲಯ ಹಾಗೂ ರಾಜೀವ್‌ ಗಾಂಧಿ ನಗರದ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕಂಪ್ಯೂಟರ್ ಲ್ಯಾಬ್‌ನ್ನು ಉದ್ಘಾಟಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್.ಎಸ್. ಪೆದ್ದಪ್ಪಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಶಿನ್ನಾಳಕರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಪೌರಾಯುಕ್ತ ಮನ್ಸೂರ ಅಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾಹುಸೇನ್‌ ಮುಧೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.