ADVERTISEMENT

ಮಠ ವಶಪಡಿಸಿಕೊಳ್ಳುವ ನಿರ್ಧಾರ: ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 10:07 IST
Last Updated 9 ಫೆಬ್ರುವರಿ 2018, 10:07 IST

ಲಕ್ಷ್ಮೇಶ್ವರ: ‘ರಾಜ್ಯ ಸರ್ಕಾರ ಮಠಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿರುವುದು ಖಂಡನೀಯ. ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದರೆ ಅದರ ಪರಿಣಾಮ ಘೋರವಾಗುತ್ತದೆ’ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಘದ ಅಧ್ಯಕ್ಷರು ಹಾಗೂ ಸಮೀಪದ ಮುಕ್ತಿಮಂದಿರ ಕ್ಷೇತ್ರದ ಪೀಠಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸಮಯದಲ್ಲಿ ಮಠಗಳು ಹೋರಾಟಗಾರರಿಗೆ ಅನ್ನ, ಆಶ್ರಯ ನೀಡಿ ತಮ್ಮ ಗುರುತರ ಕರ್ತವ್ಯ ಮೆರೆದಿವೆ. ಮಠಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಲು ಮುಂದಾಗಿ ನಿರ್ಣಯ ಅಂಗೀಕರಿಸಿರುವುದು ದುರದೃಷ್ಟಕರ ಎಂದು ಬಣ್ಣಿಸಿದರು.

ರಾಜ್ಯದ ವಿವಿಧ ಮಠಗಳು ಬಡವ ಬಲ್ಲಿದನೆಂಬ ಭೇದ ಎಣಿಸದೆ ಉಚಿತ ಅನ್ನ, ಶಿಕ್ಷಣ, ವಸತಿ ನೀಡಿ ಜನರನ್ನು ವಿದ್ಯಾವಂತರನ್ನಾಗಿ ಮಾಡುತ್ತಿವೆ ಎಂದು ತಿಳಿಸಿದರು. ‘ಇಂತಹ ವಿಷಯಗಳ ಕುರಿತು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ಮಠ, ಮಂದಿರಗಳು ಬಿಜೆಪಿ ಪರವಾಗಿವೆ ಎಂಬ ಭ್ರಮೆಯನ್ನು ಸರ್ಕಾರ ಬಿಡಬೇಕು. ಇಲ್ಲದಿದ್ದರೆ ಭಕ್ತರು ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಸರ್ಕಾರ ತನ್ನ ನಿರ್ಧಾರವನ್ನು ಕೈ ಬಿಡದಿದ್ದರೆ ಹೋರಾಟ ಅನಿವಾರ್ಯ’ ಎಂದರು.

ADVERTISEMENT

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಪುರಸಭೆ ಅಧ್ಯಕ್ಷ ಎಂ.ಆರ್. ಪಾಟೀಲ ಈ ಸಂದರ್ಭದಲ್ಲಿ ಮಾತನಾಡಿದರು. ಕುಬೇರಪ್ಪ ಮಹಾಂತಶೆಟ್ಟರ, ಪುರಸಭೆ ಉಪಾಧ್ಯಕ್ಷ ಗುರುಪುತ್ರ ಮೆಡ್ಲೇರಿ, ಅಶೋಕ ಕತ್ತಿ, ಸೋಮಣ್ಣ ಡಾಣಗಲ, ಬಸವರಾಜ ಉಮಚಗಿ, ಅನಿಲ ಮುಳಗುಂದ, ಸುನೀಲ ಮುಳಗುಂದ ಮತ್ತು ಇತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.